ವೀರಣ್ಣಬೆನವಳ್ಳಿ ಕ್ರಾಸ್ ಬಳಿ ಭೀಕರ ಅಪಘಾತ: ಏರ್ಟಿಗ ಕಾರು ಡಿಕ್ಕಿಯಾಗಿ ವ್ಯಕ್ತಿ ಸಾವು | Thippesappa from Haranahalli, died on the spot after an Ertiga car hit him while crossing the national highway near Veerannabenavalli Cross in Shivamogga taluk.
ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಸುಮಾರು 70 ವರ್ಷದ ವೃದ್ಧರೊಬ್ಬರಿಗೆ ಏರ್ಟಿಗ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ ವೀರಣ್ಣಬೆನವಳ್ಳಿ ಕ್ರಾಸ್ ಸಮೀಪ ಇಂದು ಸಂಜೆ ನಡೆದಿದೆ.
ಮೃತರನ್ನು ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದ ನಿವಾಸಿ ತಿಪ್ಪೇಶಪ್ಪ (70) ಎಂದು ಗುರುತಿಸಲಾಗಿದೆ.
ತಿಪ್ಪೇಶಪ್ಪ ಅವರು ಯಾವುದೋ ಕೆಲಸದ ನಿಮಿತ್ತ ಹಾರನಹಳ್ಳಿಯಿಂದ ವೀರಣ್ಣಬೆನವಳ್ಳಿ ಗ್ರಾಮಕ್ಕೆ ಬಂದಿದ್ದರು. ಕೆಲಸ ಮುಗಿಸಿಕೊಂಡು ವಾಪಸ್ ತೆರಳುವ ಸಂದರ್ಭದಲ್ಲಿ ವೀರಣ್ಣಬೆನವಳ್ಳಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ಮುಂದಾಗಿದ್ದಾರೆ.
ಈ ವೇಳೆ ಅಯನೂರು ಕಡೆಯಿಂದ ಶಿವಮೊಗ್ಗದತ್ತ ವೇಗವಾಗಿ ಬರುತ್ತಿದ್ದ ಏರ್ಟಿಗ ಕಾರು ರಸ್ತೆ ದಾಟುತ್ತಿದ್ದ ತಿಪ್ಪೇಶಪ್ಪ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯು ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ಮುಂದಿನ ಕ್ರಮ ಕೈಗೊಂಡಿದ್ದಾರೆ.
