ಶಿವಮೊಗ್ಗದಲ್ಲಿ ₹11.46 ಕೋಟಿ ಹೂಡಿಕೆ ವಂಚನೆ ಆರೋಪ! | 38ಕ್ಕೂ ಹೆಚ್ಚು ಮಂದಿಗೆ ವಂಚನೆ , ದಂಪತಿಗಳ ವಿರುದ್ದ ಎಫ್ಐಆರ್ | A couple in Shivamogga allegedly cheated over 38 people of more than ₹11.46 crore by promising high monthly returns through a business investment scheme. An FIR has been registered at Tunga Nagar Police Station.
ಶಿವಮೊಗ್ಗ: ಹೆಚ್ಚಿನ ಲಾಭ ನೀಡುವುದಾಗಿ ಆಮಿಷವೊಡ್ಡಿ, ವಿದೇಶಿ ಕಂಪನಿಗಳೊಂದಿಗೆ ಒಪ್ಪಂದವಿರುವುದಾಗಿ ನಂಬಿಸಿ ಸಾರ್ವಜನಿಕರಿಂದ ಬರೋಬ್ಬರಿ ₹11.46 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿರುವ ಆರೋಪ ಶಿವಮೊಗ್ಗ ನಗರದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ದಂಪತಿ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆರೋಪಿತ ದಂಪತಿ ಕಳೆದ ಒಂದು ವರ್ಷದಿಂದ ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿದ್ದು, ತಾವು ಆರಂಭಿಸಲಿರುವ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಹೆಚ್ಚಿನ ಲಾಭ ನೀಡುವುದಾಗಿ ಆಮಿಷವೊಡ್ಡಿದ್ದರು ಎನ್ನಲಾಗಿದೆ.
ಅಲ್ಲದೆ, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಮ್ಮ ಕಂಪನಿಯನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸುತ್ತಿರುವುದಾಗಿ ಹಾಗೂ ವಿದೇಶಿ ಕಂಪನಿಗಳೊಂದಿಗೆ ವ್ಯವಹಾರಿಕ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿಕೊಂಡು ಸಾರ್ವಜನಿಕರ ವಿಶ್ವಾಸ ಗಳಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದಂಪತಿಯ ಮಾತುಗಳನ್ನು ನಂಬಿದ ದೂರುದಾರರು, ಅವರ ಸ್ನೇಹಿತರು ಹಾಗೂ ಪರಿಚಯಸ್ಥರು ಸೇರಿದಂತೆ 38ಕ್ಕೂ ಹೆಚ್ಚು ಮಂದಿ ಹಣ ಹೂಡಿಕೆ ಮಾಡಿದ್ದರು ಎನ್ನಲಾಗಿದೆ. ಕೆಲವರು ತಮ್ಮ ಮನೆಗಳ ದಾಖಲೆಗಳನ್ನು ಅಡಮಾನವಿಟ್ಟು ಹಣ ಒದಗಿಸಿದ್ದರೆ, ಇನ್ನು ಕೆಲವರು ನಗದು ರೂಪದಲ್ಲಿ ಹಣ ನೀಡಿದ್ದಾರೆ.
ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ ಸೇರಿದಂತೆ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಾಗೂ ನಗದು ರೂಪದಲ್ಲಿ ಒಟ್ಟು ₹11 ಕೋಟಿ 46 ಲಕ್ಷ ರೂಪಾಯಿಗಳಿಗೂ ಅಧಿಕ ಹಣವನ್ನು ಪಡೆದುಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಹಣ ಹೂಡಿಕೆ ಮಾಡಿದವರಿಗೆ ಭರವಸೆ ನೀಡಿದಂತೆ ಯಾವುದೇ ಲಾಭಾಂಶ ನೀಡದೆ, ಹೂಡಿಕೆ ಮಾಡಿದ ಮೂಲ ಹಣವನ್ನೂ ಹಿಂದಿರುಗಿಸದೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
