ಗಂಡನ ಮನೆಯವರ ಕಿರುಕುಳ ಆರೋಪ: ವಿಷ ಸೇವಿಸಿದ್ದ ಗೃಹಿಣಿ ಸಾವು, ನಾಲ್ವರ ವಿರುದ್ಧ ಎಫ್ಐಆರ್ | Woman Akshatha dies at Shivamogga’s McGann Hospital after consuming poison amid alleged harassment by her husband and in-laws. Four booked in Thirthahalli.
ತೀರ್ಥಹಳ್ಳಿ : ಗಂಡ ಹಾಗೂ ಗಂಡನ ಮನೆಯವರಿಂದ ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದರೆನ್ನಲಾದ ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಅಕ್ಷತಾ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಪತಿ ಸೇರಿದಂತೆ ನಾಲ್ವರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿ ತಾಲೂಕಿನ ಹೊದಲ ಗ್ರಾಮದ ನಿವಾಸಿ ಅಕ್ಷತಾ ಮೃತಪಟ್ಟ ಗೃಹಿಣಿ. ಹೊಸನಗರ ತಾಲೂಕಿನ ಮಾಸ್ತಿಕಟ್ಟಿ ಸಮೀಪದ ಭೈರಗುಂದ ಗ್ರಾಮದ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಂಟು ವರ್ಷಗಳ ಹಿಂದೆ ಮದುವೆ, ದಂಪತಿಗೆ ಇಬ್ಬರು ಮಕ್ಕಳು
ಸುಮಾರು ಎಂಟು ವರ್ಷಗಳ ಹಿಂದೆ ಅಕ್ಷತಾ ಅವರನ್ನು ಹೋದಲಾ ಗ್ರಾಮದ ಶ್ರೀನಿವಾಸ್ ನಾಯ್ಕ ಅವರ ಪುತ್ರ ಪುರುಷೋತ್ತಮ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಮದುವೆಯಾದ ದಿನದಿಂದಲೂ ಪತಿ ಪುರುಷೋತ್ತಮ, ಅತ್ತೆ ಲೀಲಾವತಿ, ಅತ್ತಿಗೆ ನಾಗರತ್ನ ಹಾಗೂ ವಾಸುದೇವ ಎಂಬುವವರು ಸೇರಿಕೊಂಡು ಅಕ್ಷತಾ ಅವರಿಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತವರು ಮನೆಗೆ ಬಂದಾಗಲೆಲ್ಲ ಅಕ್ಷತಾ ಅವರು ತಮಗಾಗುತ್ತಿದ್ದ ನೋವನ್ನು ತಾಯಿಯ ಬಳಿ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ತಾಯಿ ಮಗಳಿಗೆ ಸಮಾಧಾನ ಹೇಳಿ, ಧೈರ್ಯ ತುಂಬಿ ಮತ್ತೆ ಗಂಡನ ಮನೆಗೆ ಕಳುಹಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೊರಕೆಯಿಂದ ಹಲ್ಲೆ ನಡೆಸಿದ ಆರೋಪ
ಕಳೆದ ಅಕ್ಟೋಬರ್ 13ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಕೌಟುಂಬಿಕ ವಿಚಾರವಾಗಿ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಪತಿಯ ಎದುರೇ ಅತ್ತೆ ಲೀಲಾವತಿ ಅವರು ಅಕ್ಷತಾ ಅವರಿಗೆ ಪೊರಕೆಯ ಹಿಡಿಯಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ.
ಗಂಡನ ಮನೆಯವರಿಂದ ನಿರಂತರವಾಗಿ ನಡೆಯುತ್ತಿದ್ದ ಕಿರುಕುಳ ಮತ್ತು ಅವಮಾನದಿಂದ ಮನನೊಂದ ಅಕ್ಷತಾ ವಿಷ ಸೇವಿಸಿದ್ದರು. ತಕ್ಷಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆಸ್ಪತ್ರೆಯಲ್ಲಿ ತಾಯಿ ಮೀನಾಕ್ಷಿ ವಿಚಾರಿಸಿದಾಗ, ಅಕ್ಷತಾ ತಮಗಾಗಿದ್ದ ಹಿಂಸೆಯ ಬಗ್ಗೆ ವಿವರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರಿಗೆ ಸುಳ್ಳು ಹೇಳಿಕೆ ನೀಡುವಂತೆ ಒತ್ತಡ ಹೇರಿದ ಆರೋಪ
ಅಕ್ಷತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಆರೋಪಿಗಳಾದ ಪುರುಷೋತ್ತಮ, ನಾಗರತ್ನ ಮತ್ತು ವಾಸುದೇವ ಅಲ್ಲಿಗೆ ಬಂದು, ಪೊಲೀಸರ ಮುಂದೆ ಸುಳ್ಳು ಹೇಳಿಕೆ ನೀಡುವಂತೆ ಆಕೆಯನ್ನು ಪುಸಲಾಯಿಸಿ ಒತ್ತಡ ಹೇರಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಂತರ ಶಿವಮೊಗ್ಗದ ತಹಶೀಲ್ದಾರ್ ಅವರು ಅಕ್ಷತಾ ಅವರ ಹೇಳಿಕೆ ದಾಖಲಿಸಿಕೊಳ್ಳಲು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದರೆ, ಅಷ್ಟರಲ್ಲಾಗಲೇ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೇಳಿಕೆ ಪಡೆಯಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಚಿಕಿತ್ಸೆ ಫಲಿಸದೆ ಸಾವು: ನಾಲ್ವರ ವಿರುದ್ಧ ಪ್ರಕರಣ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಷತಾ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟಿದ್ದು, ಶುಕ್ರವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಗಳ ಸಾವಿಗೆ ಗಂಡನ ಮನೆಯವರೇ ಕಾರಣ ಎಂದು ಆರೋಪಿಸಿರುವ ತಾಯಿ , ಪತಿ ಪುರುಷೋತ್ತಮ, ಅತ್ತೆ ಲೀಲಾವತಿ, ಅತ್ತಿಗೆ ನಾಗರತ್ನ ಹಾಗೂ ವಾಸುದೇವ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ತಾಯಿಯ ದೂರಿನ ಮೇರೆಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಿದೆ.
