w
Headlines
Home » ತೀರ್ಥಹಳ್ಳಿಯಲ್ಲಿ ಈಡಿಗ-ಬಿಲ್ಲವ ಸಮಾಜದ ಬೃಹತ್ ಸಮಾವೇಶ: ಮಧು ಬಂಗಾರಪ್ಪ ಹೇಳಿದ್ದೇನು?

ತೀರ್ಥಹಳ್ಳಿಯಲ್ಲಿ ಈಡಿಗ-ಬಿಲ್ಲವ ಸಮಾಜದ ಬೃಹತ್ ಸಮಾವೇಶ: ಮಧು ಬಂಗಾರಪ್ಪ ಹೇಳಿದ್ದೇನು?

Screenshot 2026 10 24 18 10 56 762 photoeditor.layout.collagemaker edit

ತೀರ್ಥಹಳ್ಳಿಯಲ್ಲಿ ಈಡಿಗ-ಬಿಲ್ಲವ ಸಮಾಜದ ಬೃಹತ್ ಸಮಾವೇಶ: ಮಧು ಬಂಗಾರಪ್ಪ ಹೇಳಿದ್ದೇನು? | Madhu Bangarappa calls for unity, education and social development at the Brahmashree Narayana Guru Jayanti and Eediga-Billava community convention in Thirthahalli.

ತೀರ್ಥಹಳ್ಳಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯದಂತೆ ಸಮಾಜವು ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪಂಗಡ ಹಾಗೂ ರಾಜಕೀಯ ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಕರೆ ನೀಡಿದರು.

ತೀರ್ಥಹಳ್ಳಿಯ ಸುವರ್ಣ ಸಂಸ್ಕೃತಿ ಭವನದ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣಾ ಸಮಿತಿ, ಆರ್ಯ ಈಡಿಗರ ಸಂಘ, ಬಿಲ್ಲವ ಸಂಘ, ನಾರಾಯಣ ಗುರು ವಿಚಾರ ವೇದಿಕೆ, ಈಡಿಗ-ಬಿಲ್ಲವ ಮಹಿಳಾ ಸಂಘ ಹಾಗೂ ಸಮಾಜದ ಸಹಕಾರ ಸಂಘಗಳ ನೇತೃತ್ವದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಮತ್ತು ಸಮಾಜದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಬಂಧುಗಳು ಇಂದು ತೀರ್ಥಹಳ್ಳಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ಒಗ್ಗಟ್ಟಾಗಿ ಸೇರಿರುವುದು ಐತಿಹಾಸಿಕ ಬೆಳವಣಿಗೆಯಾಗಿದೆ. ಇದೇ ಒಗ್ಗಟ್ಟನ್ನು ರಾಜ್ಯಾದ್ಯಂತ ವಿಸ್ತರಿಸುವ ಮೂಲಕ ಸಮಾಜದ ಶಕ್ತಿಯನ್ನು ಮತ್ತಷ್ಟು ಬಲಪಡಿಸಬೇಕು. ಸಮಾಜದವರು ಈವರೆಗೆ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದು, ಇನ್ನು ಮುಂದಾದರೂ ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಸಮಾಜದ ಅಭಿವೃದ್ಧಿಗೆ ಸದಾ ತಮ್ಮ ಬೆಂಬಲ ಇರಲಿದೆ ಎಂದು ಸಚಿವರು ಭರವಸೆ ನೀಡಿದರು.

ಯಾವುದೇ ಕೆಲಸಕ್ಕಾಗಿ ಬೇರೆಯವರ ಮನೆ ಬಾಗಿಲು ಕಾಯುವ ಪರಿಸ್ಥಿತಿ ಸಮಾಜಕ್ಕೆ ಬರಬಾರದು. ಶತಮಾನಗಳ ಹಿಂದೆಯೇ ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿದಂತೆ ಸಂಘಟಿತರಾಗಿ ಮುನ್ನಡೆಯಬೇಕು. ನಮ್ಮ ಸಮಾಜದವರು ಇತರರಿಗೆ ಅವಲಂಬಿತರಾಗುವ ಬದಲು, ಇತರರು ನಮ್ಮ ಸಹಕಾರವನ್ನು ಬಯಸುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಮಧು ಬಂಗಾರಪ್ಪ ಹೇಳಿದರು.

ಸಮಾಜದ ಹೆಮ್ಮೆಯ ನಾಯಕರನ್ನು ಸ್ಮರಿಸಿದ ಸಚಿವರು, ವರನಟ ಡಾ. ರಾಜ್‌ಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಸಮಾಜದ ಎರಡು ಕಣ್ಣುಗಳಿದ್ದಂತೆ. ನಟ ಪುನೀತ್ ರಾಜ್‌ಕುಮಾರ್ ಅವರು ಮೂರನೇ ಕಣ್ಣಿನಂತೆ ಹೊರಹೊಮ್ಮಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಇಂತಹ ಮಹಾನ್ ವ್ಯಕ್ತಿತ್ವಗಳು ನಮ್ಮ ಸಮಾಜದ ಹೆಮ್ಮೆಯಾಗಿದ್ದು, ಅವರ ಆದರ್ಶಗಳನ್ನು ಸ್ಮರಿಸಬೇಕು ಎಂದರು.

ಪ್ರಸ್ತುತ ಸರ್ಕಾರದಲ್ಲಿ ತಮ್ಮ ಸಮಾಜದಿಂದ ತಾವೊಬ್ಬರೇ ಸಚಿವರಾಗಿದ್ದು, ಸಮುದಾಯದ ಅಭಿವೃದ್ಧಿಯ ಹೊಣೆಗಾರಿಕೆ ತಮ್ಮ ಮೇಲಿದೆ. ಸಮಾಜದ ಬೇಡಿಕೆಗಳನ್ನು ಮುಡುಬ ರಾಘವೇಂದ್ರ ಅವರು ತಮ್ಮ ಗಮನಕ್ಕೆ ತಂದಿದ್ದಾರೆ. ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಹಾಸ್ಟೆಲ್ ನಿರ್ಮಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಬದ್ಧರಾಗಿರುವುದಾಗಿ ತಿಳಿಸಿದರು.

ನಾಡಿಗೆ ಬೆಳಕು ನೀಡುವ ಉದ್ದೇಶದಿಂದ ತಮ್ಮ ಬದುಕನ್ನೇ ಕತ್ತಲಲ್ಲಿ ಕಳೆದಿರುವ ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ತಮ್ಮ ಜವಾಬ್ದಾರಿಯಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಸುಪ್ರೀಂ ಕೋರ್ಟ್‌ನ ಒಪ್ಪಿಗೆಗೂ ಪೂರಕವಾಗುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಅವರ ಆಶಯಗಳನ್ನು ಈಡೇರಿಸುವುದು ತಮ್ಮ ಗುರಿಯಾಗಿದೆ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಬಳಿಕ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಈ ವಿಚಾರದಲ್ಲಿ ವಿಶೇಷ ಆಸಕ್ತಿ ವಹಿಸಿ, ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಮಟ್ಟದಲ್ಲಿ ಯಾವುದೇ ಅಡೆತಡೆಗಳು ಎದುರಾಗದಂತೆ ಸಹಕಾರ ನೀಡಬೇಕು ಎಂದು ವೇದಿಕೆಯಲ್ಲೇ ಮನವಿ ಮಾಡಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವುದು, ಅವರ ಚಿಂತನೆಗಳ ಅಧ್ಯಯನಕ್ಕಾಗಿ ಅಧ್ಯಯನ ಪೀಠ ಸ್ಥಾಪಿಸುವುದು ಹಾಗೂ ಅವರ ವಿಚಾರಧಾರೆಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವಂತೆ ತಾವು ವಿರೋಧ ಪಕ್ಷದಲ್ಲಿದ್ದಾಗಲೇ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾಗಿ ತಿಳಿಸಿದರು.

ಈ ಬೇಡಿಕೆಗಳಿಗೆ ಸಿದ್ದರಾಮಯ್ಯ ಅವರು ಅಂದೇ ಸಮ್ಮತಿ ಸೂಚಿಸಿದ್ದರು. ನಾರಾಯಣ ಗುರುಗಳ ತತ್ವಾದರ್ಶಗಳು ಮುಂದಿನ ಪೀಳಿಗೆಗೆ ತಲುಪಬೇಕು. ಅವರ ಆಶಯದಂತೆ ಸಮಾಜದ ಪ್ರತಿಯೊಂದು ಮಗುವೂ ಶಿಕ್ಷಣ ಪಡೆಯಬೇಕು. ಶಿಕ್ಷಣವೇ ಸಮಾಜದ ಪ್ರಗತಿಗೆ ಪ್ರಮುಖ ಸಾಧನವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ನಿಟ್ಟೂರು-ಗರ್ತಿಕೆರೆಯ ಬ್ರಹ್ಮಶ್ರೀ ನಾರಾಯಣ ಗುರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ವಹಿಸಿದ್ದರು. ಸಾರಗನಜಡ್ಡು ಕಾರ್ತಿಕೇಯ ಮಠದ ಶ್ರೀ ಯೋಗೇಂದ್ರ ಅವಧೂತರು ಉಪಸ್ಥಿತರಿದ್ದರು.

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನೀಲ್ ಕುಮಾರ್, ಉಮಾನಾಥ ಕೋಟ್ಯಾನ್, ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮುಡುಬ ರಾಘವೇಂದ್ರ ಸೇರಿದಂತೆ ಆರ್ಯ ಈಡಿಗ-ಬಿಲ್ಲವ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾವಿರಾರು ಸಮಾಜದ ಬಂಧುಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.