ತೀರ್ಥಹಳ್ಳಿ ಗಾಂಧಿಚೌಕದಲ್ಲಿ ನೂತನ ಅಶೋಕ ಸ್ತಂಭ ಲೋಕಾರ್ಪಣೆ |Thirthahalli Gandhi Chowk gets a newly constructed Ashoka Pillar. MLA Araga Jnanendra inaugurated the pillar and urged citizens to maintain cleanliness and preserve the historic landmark.
ತೀರ್ಥಹಳ್ಳಿ: “ಯಾವುದೇ ಊರಿಗೆ ಒಂದು ಪ್ರಮುಖ ಲ್ಯಾಂಡ್‌ಮಾರ್ಕ್ ಇರುತ್ತದೆ. ತೀರ್ಥಹಳ್ಳಿಗೆ ಗಾಂಧಿಚೌಕವೇ ಪ್ರಮುಖ ಲ್ಯಾಂಡ್‌ಮಾರ್ಕ್” ಪಟ್ಟಣದ ಗಾಂಧಿಚೌಕ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣಸಲ್ಲು ನೂತನವಾಗಿ ನಿರ್ಮಿಸಿರುವ ಅಶೋಕ ಸ್ತಂಭವನ್ನು ಅವರು ಲೋಕಾರ್ಪಣೆ ಮಾಡಿ ನಂತರ ಮಾತನಾಡಿದ ಅವರು ಜಾತ್ರೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಪಟ್ಟಣಕ್ಕೆ ಬರುವವರು ದಾರಿ ತಪ್ಪಿದಾಗ ಗಾಂಧಿಚೌಕವನ್ನು ಗುರುತಾಗಿ ಬಳಸಿಕೊಳ್ಳುತ್ತಿದ್ದರು. ಇದೀಗ ಅದೇ ಸ್ಥಳದಲ್ಲಿ ಅಶೋಕ ಸ್ತಂಭ ನಿರ್ಮಾಣವಾಗಿರುವುದು ಗಾಂಧಿಚೌಕದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.
ರಾಷ್ಟ್ರೀಯ ಲಾಂಛನವನ್ನು ಹೊಂದಿರುವ ಅಶೋಕ ಸ್ತಂಭಕ್ಕೆ ಇನ್ನಷ್ಟು ಮೆರುಗು ನೀಡುವಂತೆ ಸಾರ್ವಜನಿಕರು ಸ್ಥಳದ ಸ್ವಚ್ಛತೆಯನ್ನು ಕಾಪಾಡಬೇಕು. ಸ್ವಯಂಪ್ರೇರಿತವಾಗಿ ನಾಗರಿಕರು ಸ್ವಚ್ಛತೆ ಕಾಪಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಕರೆ ನೀಡಿದರು.
ಜಪಾನ್ ಪ್ರವಾಸದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಂಡುಬಂದಿರುವುದನ್ನು ಉಲ್ಲೇಖಿಸಿದ ಅವರು, ಅಲ್ಲಿನ ಜನರ ನಾಗರಿಕ ಪ್ರಜ್ಞೆಯಂತೆ ನಮ್ಮಲ್ಲಿಯೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆ ಕುರಿತು ಮಾತನಾಡಿದ ಅವರು, ಗಾಂಧೀಜಿ ಒಬ್ಬ ವ್ಯಕ್ತಿಯಷ್ಟೇ ಅಲ್ಲ, ಒಂದು ವಿಚಾರಧಾರೆ. ಅಹಿಂಸೆ ಮತ್ತು ಸರಳ ಜೀವನದ ಸಂದೇಶವನ್ನು ಅವರು ಸಾರಿದ್ದರು. ಗಾಂಧೀಜಿ ಅವರ ಆದರ್ಶಗಳನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಗಾಂಧೀಜಿ ಭೇಟಿ ನೆನಪಿಗಾಗಿ ಅಶೋಕ ಸ್ತಂಭ
ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ ಮಾತನಾಡಿ, ಗಾಂಧಿಚೌಕದಲ್ಲಿ ಅಶೋಕ ಸ್ತಂಭವನ್ನು ಮತ್ತೊಮ್ಮೆ ನಿರ್ಮಿಸಿರುವುದು ಮಹತ್ವದ ವಿಚಾರವಾಗಿದೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿ ತೀರ್ಥಹಳ್ಳಿಗೆ ಆಗಮಿಸಿ ಹೋರಾಟದಲ್ಲಿ ಭಾಗವಹಿಸಿದ್ದ ಐತಿಹಾಸಿಕ ನೆನಪಿಗಾಗಿ ಅಶೋಕ ಸ್ತಂಭ ನಿರ್ಮಿಸಲಾಗಿದೆ. ಸುಮಾರು 100 ವರ್ಷಗಳ ಹಿಂದಿನ ಇತಿಹಾಸವನ್ನು ಸ್ಮರಿಸುವ ರೀತಿಯಲ್ಲಿ ಈ ಸ್ಥಳವನ್ನು ಅಭಿವೃದ್ಧಿಪಡಿಸಿರುವುದು ವಿಶೇಷ ಎಂದರು.
ಗಾಂಧಿಚೌಕವು ಮುಂದಿನ ದಿನಗಳಲ್ಲಿ ಸಾರ್ವಜನಿಕ ಪ್ರತಿಭಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸೂಕ್ತ ಸ್ಥಳವಾಗಬಹುದು. ಅಗತ್ಯವಿದ್ದಲ್ಲಿ ಮಧ್ಯಾಹ್ನದ ಬದಲಿಗೆ ಸಂಜೆ ವೇಳೆಯಲ್ಲಿ ಪ್ರತಿಭಟನೆಗಳಿಗೆ ಅವಕಾಶ ನೀಡುವ ಬಗ್ಗೆಯೂ ಚಿಂತಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಪಟ್ಟಣ ಪಂಚಾಯಿತಿ ಸದಸ್ಯರು, ಮುಖ್ಯಾಧಿಕಾರಿ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
