ಚಾಲಕನ ಖಾತೆಗೆ ಕನ್ನ ಹಾಕಿದ ಸೈಬರ್ ವಂಚಕರು; ₹4.04 ಲಕ್ಷ ಎಗರಿಸಿದ ಕಳ್ಳರು | Cyber fraudsters allegedly cheated a driver of ₹4.04 lakh from his bank account in Shivamogga. A case has been registered at the Shivamogga CEN Police Station.
ಶಿವಮೊಗ್ಗ: ಚಾಲಕನೊಬ್ಬರ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ಸೈಬರ್ ವಂಚಕರು ಬ್ಯಾಂಕ್ ಖಾತೆಯಿಂದ ₹4.04 ಲಕ್ಷ ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.
ದೂರುದಾರರ ಮೊಬೈಲ್‌ಗೆ ಹಣ ವಿತ್‌ಡ್ರಾ ಆಗಿರುವ ಕುರಿತು ಸರಣಿ ಸಂದೇಶಗಳು ಬಂದಿದ್ದು, ಸಂದೇಶವನ್ನು ಪರಿಶೀಲಿಸಿದಾಗ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹4,04,125 ಹಣ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ, ಅಪರಿಚಿತ ವ್ಯಕ್ತಿಗಳು ದೂರುದಾರರ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಂಡು, ಅವರಂತೆ ನಟಿಸಿ ಬ್ಯಾಂಕ್ ಖಾತೆಯಿಂದ ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿರುವುದು ತಿಳಿದುಬಂದಿದೆ.
ಈ ಕುರಿತು ವಂಚಕರನ್ನು ಪತ್ತೆಹಚ್ಚಿ, ವಂಚನೆಯಾಗಿರುವ ಹಣವನ್ನು ವಾಪಸ್ ಕೊಡಿಸಬೇಕು ಎಂದು ದೂರುದಾರರು ಶಿವಮೊಗ್ಗದ ಸಿಇಎನ್ (ಸೈಬರ್ ಎಕನಾಮಿಕ್ ಅಂಡ್ ನಾರ್ಕೋಟಿಕ್ಸ್) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೈಬರ್ ವಂಚನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.
