ಜೀವ ಉಳಿಸುವ ಹೊತ್ತಲ್ಲಿ ನಿಯಮದ ನೆಪ? ಹಾವು ಕಚ್ಚಿದ ರೈತನಿಗೆ 108 ಸೇವೆ ವಿಳಂಬ ಆರೋಪ | A farmer bitten by a cobra in Hosanagara was referred to Shivamogga for advanced treatment, but 108 ambulance staff allegedly hesitated to transport him, triggering public anger.
ಹೊಸನಗರ: ಜಮೀನಿನಲ್ಲಿ ಹುಲ್ಲು ಕೊಯ್ಯುತ್ತಿದ್ದ ವೇಳೆ ರೈತನಿಗೆ ನಾಗರಹಾವು ಕಚ್ಚಿದ ಘಟನೆ ತಾಲೂಕಿನ ನಗರ ಸಮೀಪದ ಕಾಡಿಗೆರೆ ಗ್ರಾಮದಲ್ಲಿ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ರೈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲು 108 ಆಂಬುಲೆನ್ಸ್ ಸಿಬ್ಬಂದಿ ಆರಂಭದಲ್ಲಿ ಹಿಂದೇಟು ಹಾಕಿದ ಆರೋಪ ಕೇಳಿಬಂದಿದೆ.
ಕಾಡಿಗೆರೆ ಗ್ರಾಮದ ರೈತ ಉಮೇಶ್ ಹಾವು ಕಡಿತಕ್ಕೊಳಗಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೊಸನಗರ ಆಸ್ಪತ್ರೆಗೆ ಕರೆತರಲಾಗಿತ್ತು. ಉಮೇಶ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವೈದ್ಯರು ಅವರನ್ನು ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಿದ್ದಾರೆ.
ಆದರೆ, ರೆಫರ್ ಮಾಡಲಾದ ರೋಗಿಯನ್ನು ಶಿವಮೊಗ್ಗಕ್ಕೆ ಕರೆದೊಯ್ಯಲು 108 ಆಂಬುಲೆನ್ಸ್ ಸಿಬ್ಬಂದಿ ಆರಂಭದಲ್ಲಿ ಒಪ್ಪಲಿಲ್ಲ ಎನ್ನಲಾಗಿದೆ. “ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ರೆಫರ್ ಮಾಡಲಾದ ಪ್ರಕರಣಗಳನ್ನು ಸಾಗಿಸಲು ನಮ್ಮ ನಿಯಮಗಳಲ್ಲಿ ಅವಕಾಶವಿಲ್ಲ” ಎಂದು ಸಿಬ್ಬಂದಿ ತಿಳಿಸಿದ್ದಾರೆ ಎನ್ನಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿದ್ದ ರೋಗಿಯನ್ನು ಸಾಗಿಸಲು ವಿಳಂಬವಾಗುತ್ತಿರುವುದನ್ನು ಕಂಡ ಆಸ್ಪತ್ರೆ ಆವರಣದಲ್ಲಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರಾದ ರಾಜೇಶ್ ಹಿರಿಮನೆ, ನಿತಿನ್ ಸೇರಿದಂತೆ ಹಲವರು 108 ಸಿಬ್ಬಂದಿಯನ್ನು ಪ್ರಶ್ನಿಸಿದರು.
ನಂತರ ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಅದೇ 108 ಆಂಬುಲೆನ್ಸ್‌ನಲ್ಲಿ ಉಮೇಶ್ ಅವರನ್ನು ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ.
ಹಾವು ಕಡಿತದಂತಹ ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ಸೇವೆ ನೀಡುವಲ್ಲಿ ವಿಳಂಬವಾಗಿರುವ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇಂತಹ ಸಂದರ್ಭಗಳಲ್ಲಿ 108 ಆಂಬುಲೆನ್ಸ್ ಸೇವೆಯ ನಿಯಮಗಳು ಹಾಗೂ ರೆಫರ್ ಪ್ರಕರಣಗಳ ಕುರಿತು ಸ್ಪಷ್ಟ ಮಾರ್ಗಸೂಚಿ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
