ತಹಶೀಲ್ದಾರ್ ಜೀಪಿಗೆ ಕಾರು ಡಿಕ್ಕಿ; ಪರಾರಿಯಾಗುತ್ತಿದ್ದ ಚಾಲಕನನ್ನು ಬೆನ್ನಟ್ಟಿ ಹಿಡಿದ ತಹಶೀಲ್ದಾರ್
A car collided with the Thirthahalli Tahsildar’s official jeep in Shivamogga. The driver allegedly attempted to flee but was chased and stopped near the Deputy Commissioner’s office.
ಶಿವಮೊಗ್ಗ: ತಹಶೀಲ್ದಾರ್ರ ಸರ್ಕಾರಿ ಜೀಪಿಗೆ ಕಾರೊಂದು ಡಿಕ್ಕಿ ಹೊಡೆದು, ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಘಟನೆ ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿ ನಡೆದಿದೆ.
ತೀರ್ಥಹಳ್ಳಿ ತಹಶೀಲ್ದಾರ್ ರಂಜಿತ್ ಅವರು ಜೀಪ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರು ಜೀಪಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ಬಳಿಕ ಕಾರು ಚಾಲಕ ವಾಹನ ನಿಲ್ಲಿಸದೆ ಶಿಕಾರಿಪುರದತ್ತ ತೆರಳಲು ಮುಂದಾಗಿದ್ದಾನೆ.
ಘಟನೆಯನ್ನು ಗಮನಿಸಿದ ತಹಶೀಲ್ದಾರ್ ರಂಜಿತ್ ಹಾಗೂ ಜೀಪ್ ಚಾಲಕ ಕಾರನ್ನು ಬೆನ್ನಟ್ಟಿದ್ದಾರೆ. ಬಳಿಕ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.
ಕಾರಿನಲ್ಲಿದ್ದ ಚಾಲಕ ಶಿಕಾರಿಪುರ ಮೂಲದವನು ಎಂದು ತಿಳಿದುಬಂದಿದ್ದು, ಆತ ಮದ್ಯಪಾನ ಮಾಡಿದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದ ಎನ್ನಲಾಗಿದೆ. ಕಾರನ್ನು ತಡೆದ ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಚಾಲಕ ಕೆಲಕಾಲ ರಂಪಾಟ ನಡೆಸಿದ್ದಾನೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಘಾತದ ನಿಖರ ಕಾರಣ ಹಾಗೂ ಪ್ರಕರಣದ ಕಾನೂನು ಕ್ರಮಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.