ಬಾಲಕ ಓಡಿಸಿದ ಬೊಲೆರೊ, ದಂಡ ಕಟ್ಟಿದ ತಂದೆ! ₹26,500 ಫೈನ್

ಬಾಲಕ ಓಡಿಸಿದ ಬೊಲೆರೊ, ದಂಡ ಕಟ್ಟಿದ ತಂದೆ! ₹26,500 ಫೈನ್

A Shivamogga court fined a father ₹26,500 after his 16-year-old son was found driving a Mahindra Bolero on Thirthahalli Road.

ಶಿವಮೊಗ್ಗ: ಅಪ್ರಾಪ್ತ ಬಾಲಕನಿಗೆ ಮಹೀಂದ್ರಾ ಬೊಲೆರೊ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಪ್ರಕರಣದಲ್ಲಿ ವಾಹನದ ಮಾಲೀಕರಾದ ತಂದೆಗೆ ಶಿವಮೊಗ್ಗ ನ್ಯಾಯಾಲಯ ₹26,500 ದಂಡ ವಿಧಿಸಿದೆ.

ಅಪ್ರಾಪ್ತ ಮಕ್ಕಳ ಕೈಗೆ ವಾಹನ ನೀಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿವಮೊಗ್ಗ ಸಂಚಾರ ಪೊಲೀಸರು ಈ ಸಂಬಂಧ ವಿಡಿಯೋ ಸಂದೇಶವೊಂದನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಡೆದ ಘಟನೆ ಏನು?

2026ರ ಆಗಸ್ಟ್ 16ರಂದು ಸಂಜೆ ಸುಮಾರು 5.47ಕ್ಕೆ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ತೀರ್ಥಹಳ್ಳಿ ರಸ್ತೆಯಲ್ಲಿ ಪಿಎಸ್‌ಐ ಸ್ವಪ್ನಾ ಅವರು ವಾಹನ ತಪಾಸಣೆ ನಡೆಸುತ್ತಿದ್ದರು.

ಈ ವೇಳೆ KA-1–6* ನೋಂದಣಿ ಸಂಖ್ಯೆಯ ಮಹೀಂದ್ರಾ ಬೊಲೆರೊ ವಾಹನವನ್ನು ತಡೆದು ಪರಿಶೀಲಿಸಿದಾಗ, ವಾಹನ ಚಲಾಯಿಸುತ್ತಿದ್ದ ವ್ಯಕ್ತಿ ಕೇವಲ 16 ವರ್ಷದ ಅಪ್ರಾಪ್ತ ಬಾಲಕ ಎಂಬುದು ತಿಳಿದುಬಂದಿದೆ.

ಅಪ್ರಾಪ್ತ ಬಾಲಕನಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ವಾಹನದ ಮಾಲೀಕರೂ ಆಗಿರುವ ಆತನ ತಂದೆಯ ವಿರುದ್ಧ ಪಶ್ಚಿಮ ಸಂಚಾರ ಪೊಲೀಸರು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು 2026ರ ಆಗಸ್ಟ್ 27ರಂದು ವಾಹನದ ಮಾಲೀಕರಿಗೆ ₹26,500 ದಂಡ ವಿಧಿಸಿದೆ.

ದಂಡ ಪಾವತಿಸಿದ ಬಳಿಕ, ಇತರ ಪೋಷಕರಿಗೂ ಎಚ್ಚರಿಕೆ ಹಾಗೂ ಜಾಗೃತಿ ಸಂದೇಶ ತಲುಪಿಸುವ ಉದ್ದೇಶದಿಂದ ಮಕ್ಕಳ ಕೈಗೆ ವಾಹನ ನೀಡಬೇಡಿ ಎಂಬ ಸಂದೇಶದ ವಿಡಿಯೋವನ್ನು ವಾಹನದ ಮಾಲೀಕರಿಂದಲೇ ದಾಖಲಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡುವುದು ಕಾನೂನುಬಾಹಿರವಾಗಿದ್ದು, ಪೋಷಕರು ಮತ್ತು ವಾಹನ ಮಾಲೀಕರು ಈ ಕುರಿತು ಎಚ್ಚರಿಕೆ ವಹಿಸುವಂತೆ ಶಿವಮೊಗ್ಗ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

About The Author