ತೋಟದಲ್ಲಿ ಪ್ರತ್ಯಕ್ಷವಾದ 27.7 ಕೆಜಿ ಬೃಹತ್ ಹೆಬ್ಬಾವು!

ತೋಟದಲ್ಲಿ ಪ್ರತ್ಯಕ್ಷವಾದ 27.7 ಕೆಜಿ ಬೃಹತ್ ಹೆಬ್ಬಾವು!

A massive 27.7 kg python was spotted in a plantation at Kadidal village in Thirthahalli, Shivamogga. Snake rescuer Chandru K. Nair safely rescued and released it into the forest.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಾರೋಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿದಾಳ್ ಗ್ರಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡು ಸ್ಥಳೀಯರಲ್ಲಿ ಕೆಲಕಾಲ ಆತಂಕ ಮೂಡಿಸಿದ ಘಟನೆ ನಡೆದಿದೆ.

ಕಡಿದಾಳ್ ಗ್ರಾಮದ ರಂಗಪ್ಪ ಗೌಡ ಅವರ ತೋಟದಲ್ಲಿ ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಈ ಬೃಹತ್ ಹೆಬ್ಬಾವು ಪ್ರತ್ಯಕ್ಷವಾಗಿದೆ. ತೋಟದಲ್ಲಿ ದೊಡ್ಡ ಗಾತ್ರದ ಹಾವನ್ನು ಗಮನಿಸಿದ ಸ್ಥಳೀಯರು ತಕ್ಷಣ ಉರಗ ತಜ್ಞ ಚಂದ್ರು ಕೆ. ನಾಯರ್ ಅವರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಚಂದ್ರು ಕೆ. ನಾಯರ್ ಅವರು, ಹೆಬ್ಬಾವಿಗೆ ಯಾವುದೇ ಹಾನಿಯಾಗದಂತೆ ಜಾಗರೂಕತೆಯಿಂದ ರಕ್ಷಣೆ ಮಾಡಿದ್ದಾರೆ.

ರಕ್ಷಿಸಲ್ಪಟ್ಟ ಹೆಬ್ಬಾವು ಬರೋಬ್ಬರಿ 27.750 ಕೆಜಿ ತೂಕ ಹೊಂದಿದ್ದು, ಅದರ ಬೃಹತ್ ಗಾತ್ರ ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದುವರೆಗೆ 2,000ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿರುವ ಚಂದ್ರು ಕೆ. ನಾಯರ್ ಅವರು, ತಮ್ಮ ಉರಗ ರಕ್ಷಣಾ ಕಾರ್ಯದಲ್ಲಿ ಇಷ್ಟೊಂದು ದೊಡ್ಡ ಗಾತ್ರ ಮತ್ತು ತೂಕದ ಹೆಬ್ಬಾವನ್ನು ರಕ್ಷಿಸಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ಸಮಕ್ಷಮದಲ್ಲಿ ಹೆಬ್ಬಾವನ್ನು ಸುರಕ್ಷಿತವಾಗಿ ಚೀಲದಲ್ಲಿ ಇರಿಸಿ, ಬಳಿಕ ಅರಣ್ಯ ಇಲಾಖೆಯ ನಿಯಮಾವಳಿಗಳ ಅನುಸಾರ ಸೂಕ್ತ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಗಿದೆ.

About The Author