ದೀರ್ಘಕಾಲದಿಂದ ಗೈರುಹಾಜರಾಗಿದ್ದ ಮಕ್ಕಳನ್ನು ಶಾಲೆಗೆ ಮರಳಿ ಕರೆತರಲು ಜಾಗೃತಿ ಅಭಿಯಾನ
Awareness campaign conducted by Government High School, Ripponpete, along with education, panchayat, child protection and police departments to bring long-term absent students back to school. Three students re-enrolled.
ರಿಪ್ಪನ್‌ಪೇಟೆ: ದೀರ್ಘಕಾಲದಿಂದ ಶಾಲೆಗೆ ಗೈರುಹಾಜರಾಗಿರುವ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲೂಕು ಪಂಚಾಯಿತಿ ಹೊಸನಗರ, ಮಕ್ಕಳ ರಕ್ಷಣಾ ಸಮಿತಿ, ಗ್ರಾಮ ಪಂಚಾಯಿತಿ ರಿಪ್ಪನ್‌ಪೇಟೆಯ ಹೆಣ್ಣು ಮಕ್ಕಳ ಸುರಕ್ಷತಾ ಸಮಿತಿ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಆ.24 ಮತ್ತು 25ರಂದು ಸರ್ಕಾರಿ ಪ್ರೌಢಶಾಲೆ, ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ಅಭಿಯಾನದ ಅಂಗವಾಗಿ ಶಾಲೆಗೆ ಗೈರುಹಾಜರಾಗಿರುವ ವಿದ್ಯಾರ್ಥಿಗಳ ಮನೆಗಳಿಗೆ ತಂಡದ ಸದಸ್ಯರು ಭೇಟಿ ನೀಡಿ, ಮಕ್ಕಳೊಂದಿಗೆ ಹಾಗೂ ಪೋಷಕರೊಂದಿಗೆ ಮಾತುಕತೆ ನಡೆಸಿ, ಶಿಕ್ಷಣದ ಮಹತ್ವವನ್ನು ತಿಳಿಸಿದರು. ಮಕ್ಕಳನ್ನು ಮತ್ತೆ ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ಮನವಿ ಮಾಡಿ, ಶಾಲಾ ಶಿಕ್ಷಣದಿಂದ ದೂರ ಉಳಿಯದಂತೆ ಮಕ್ಕಳನ್ನು ಮನವೊಲಿಸಲಾಯಿತು.
ಅಭಿಯಾನದ ಫಲವಾಗಿ ಮೂರು ವಿದ್ಯಾರ್ಥಿಗಳು ಪುನಃ ಶಾಲೆಗೆ ದಾಖಲಾಗಿದ್ದಾರೆ. ಇನ್ನೂ ಶಾಲೆಗೆ ಹಾಜರಾಗದಿರುವ ವಿದ್ಯಾರ್ಥಿಗಳೂ ಶೀಘ್ರದಲ್ಲೇ ಶಾಲೆಗೆ ಹಾಜರಾಗುವುದಾಗಿ ಭರವಸೆ ನೀಡಿದ್ದಾರೆ.ಶಾಲೆಯಿಂದ ದೂರ ಉಳಿದಿರುವ ಮಕ್ಕಳನ್ನು ಗುರುತಿಸಿ, ಅವರನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವ ಈ ಜಾಗೃತಿ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದೆ.
ಅಭಿಯಾನದಲ್ಲಿ ಡಿಪಿಯುಸಿ ರಿಪ್ಪನ್‌ಪೇಟೆಯ ಪ್ರಭಾರ ಉಪಪ್ರಾಂಶುಪಾಲರಾದ ಸುಧಾ ಹೆಗಡೆ, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಬಿಆರ್‌ಪಿ ಮಂಜುಳಾ, ಸಿಆರ್‌ಪಿ ಮಂಜುನಾಥ್, ಪೊಲೀಸ್ ಕಾನ್ಸ್‌ಟೇಬಲ್ ನವೀನ್, ಪರಮೇಶ್, ಸಿಆರ್‌ಪಿ ನಾಗರಾಜ್, ಶಿಕ್ಷಕರಾದ ಚಂದ್ರಪ್ಪ ಕೆ., ಸುಷ್ಮಾ, ನಾಗಮಣಿ ಹಾಗೂ ಪಂಚಾಯಿತಿ ಸಿಬ್ಬಂದಿಗಳಾದ ಲಕ್ಷ್ಮಿ, ಶಾಲಿನಿ ಸೇರಿದಂತೆ ಹಲವರು ಭಾಗವಹಿಸಿದ್ದರು.