ಮಾದಕ ವಸ್ತು ಮಾರಾಟಕ್ಕೆ ಯತ್ನ – 1.2 ಕೆಜಿ ಗಾಂಜಾ ಸಮೇತ ಆರೋಪಿ ವಶಕ್ಕೆ
A 24-year-old man was arrested in Shivamogga for allegedly attempting to sell 1.207 kg of ganja. Doddapete Police seized the contraband worth approximately ₹65,000 and registered a case under the NDPS Act.
ಶಿವಮೊಗ್ಗ: ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಎನ್.ಟಿ. ರಸ್ತೆಯ ನಮೋ ಶಂಕರ್ ಲೇಔಟ್ನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿ, ಆತನಿಂದ 1 ಕೆಜಿ 207 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ನಮೋ ಶಂಕರ್ ಲೇಔಟ್ನ 3ನೇ ಕ್ರಾಸ್ನಲ್ಲಿ ಕಪ್ಪು ಬಣ್ಣದ ಬ್ಯಾಗ್ ಹಿಡಿದು ಸಾರ್ವಜನಿಕರಿಗೆ ಅನುಮಾನಾಸ್ಪದ ರೀತಿಯಲ್ಲಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿದೆ.
ಬಂಧಿತನನ್ನು ಅಬ್ಬು ಶಾಖಾದ್ರಿ ಜಹೀರುದ್ದೀನ್ (24) ಎಂದು ಗುರುತಿಸಲಾಗಿದ್ದು, ಆತ ಶಿವಮೊಗ್ಗ ನಗರದ ರಾಗಿಗುಡ್ಡ 4ನೇ ಕ್ರಾಸ್ ನಿವಾಸಿಯಾಗಿದ್ದು, ಹಮಾಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಬಳಿ ಇದ್ದ ಕಪ್ಪು ಬಣ್ಣದ ಬ್ಯಾಗ್ ಪರಿಶೀಲಿಸಿದ ವೇಳೆ ಬಿಳಿ ಬಟ್ಟೆಯಲ್ಲಿ ಸುತ್ತಿ ಪ್ಯಾಕ್ ಮಾಡಲಾಗಿದ್ದ ಗಾಂಜಾ ಪತ್ತೆಯಾಗಿದೆ. ತೂಕ ಪರಿಶೀಲಿಸಿದಾಗ ಪ್ಯಾಕಿಂಗ್ ಸಮೇತ 1 ಕೆಜಿ 207 ಗ್ರಾಂ ಗಾಂಜಾ ಇದ್ದು, ಇದರ ಅಂದಾಜು ಮೌಲ್ಯ ₹65,000 ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
About The Author
ನಮಸ್ಕಾರ, ನಾನು ರಫಿ ರಿಪ್ಪನ್ಪೇಟೆ.
’ಪೋಸ್ಟ್ಮ್ಯಾನ್ ನ್ಯೂಸ್’ ಮಾಧ್ಯಮದ ಹಿಂದಿರುವ ಓರ್ವ ಅಪ್ಪಟ ಸುದ್ದಿಪ್ರೇಮಿ ಹಾಗೂ ಪತ್ರಕರ್ತ. “ನಮ್ಮೂರ ಸುದ್ದಿಗಳು ಜಗತ್ತಿಗೆ ತಲುಪಬೇಕು” ಎಂಬ ಆರು ವರ್ಷಗಳ ಕನಸಿನ ಕೂಸೇ ಈ ನಮ್ಮ ಪೋಸ್ಟ್ಮ್ಯಾನ್ ನ್ಯೂಸ್.
ಸ್ಥಳೀಯ ಪತ್ರಿಕೆಗಳಿಂದ ಹಿಡಿದು ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೂ ಮಾಧ್ಯಮದ ನಾನಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದು. ಆದರೆ, ಈ ಪಯಣದಲ್ಲಿ ನನಗೊಂದು ಕೊರತೆ ಸದಾ ಕಾಡುತ್ತಿತ್ತು; ಅದೇನೆಂದರೆ, ‘ನಿಜವಾದ ಸ್ಥಳೀಯ ಧ್ವನಿಗೆ ಅಲ್ಲಿ ಸೂಕ್ತ ವೇದಿಕೆ ಇರಲಿಲ್ಲ’. ಆ ಶೂನ್ಯವನ್ನು ತುಂಬಲು ಹುಟ್ಟಿಕೊಂಡ ಪರ್ಯಾಯ ವೇದಿಕೆಯೇ “ಪೋಸ್ಟ್ಮ್ಯಾನ್ ನ್ಯೂಸ್.”
ಇಲ್ಲಿ ‘ಸುದ್ದಿ’ ಎಂದರೆ ಕೇವಲ ಸುದ್ದಿ ಮಾತ್ರ. ಇದು ಯಾವ ವ್ಯಕ್ತಿ ಅಥವಾ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಅತ್ಯಂತ ಸ್ಪಷ್ಟ: “ಸುದ್ದಿಯನ್ನು ಪ್ರಾಮಾಣಿಕವಾಗಿ ಹೇಳಬೇಕು, ತೀರ್ಪು ಕೊಡುವ ಕೆಲಸ ನಮಗಲ್ಲ.”
ಕೆಲವೊಮ್ಮೆ ನಮ್ಮ ವರದಿಗಳಿಗೆ ಬರುವ ಪ್ರತಿಕ್ರಿಯೆಗಳು ಬೇರೆಯದೇ ಬಣ್ಣ ಪಡೆಯಬಹುದು, ಆದರೆ ಅದಕ್ಕೆ ನನ್ನ ಏಕೈಕ ಉತ್ತರ ಕೇವಲ ನನ್ನ ಕೆಲಸದ ಮೂಲಕ ಮಾತ್ರ.
’ಪೋಸ್ಟ್ಮ್ಯಾನ್ ನ್ಯೂಸ್’ ಇಂದು ಕೇವಲ ಒಂದು ಸುದ್ದಿ ಪುಟವಾಗಿ ಉಳಿದಿಲ್ಲ, ಅದೊಂದು ಜಾಗೃತಿಯ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಕೇವಲ ವರದಿ ಮಾಡುವುದಷ್ಟೇ ನಮ್ಮ ಉದ್ದೇಶವಲ್ಲ; ನಮ್ಮೂರಿನ ಘಟನೆಗಳು, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು, ಜ್ವಲಂತ ಸಮಸ್ಯೆಗಳು ಮತ್ತು ಸಾಧನೆಗಳನ್ನು ಹೊರಲೋಕಕ್ಕೆ ಪರಿಚಯಿಸುವ ‘ಸೇತುವೆ’ಯಾಗಬೇಕೆಂಬುದು ನಮ್ಮ ಹೆಬ್ಬಯಕೆ. ಹಣ ಪಡೆದು, ಕಾಸಿಗಾಗಿ ಸುದ್ದಿ ಮಾಡುವ ಅಭ್ಯಾಸವೂ ನಮಗಿಲ್ಲ, ಆ ಹವ್ಯಾಸವೂ ನಮಗಿಲ್ಲ. ಸತ್ಯ ಮತ್ತು ನೈಜತೆಯೇ ನಮ್ಮ ಬಂಡವಾಳ.
ನಮ್ಮ ಅಂತಿಮ ಗುರಿ ಒಂದೇ — “ಸಣ್ಣ ಊರುಗಳ ಸತ್ಯ ಕಥೆಗಳು, ಅತಿ ದೊಡ್ಡ ಮಟ್ಟದಲ್ಲಿ ಜಗತ್ತಿನ ಕಿವಿಗೆ ತಲುಪಬೇಕು.”
ತಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆಯೇ ಇರಲಿ.
ಸ್ನೇಹಪೂರ್ವಕವಾಗಿ,
ರಫಿ ರಿಪ್ಪನ್ಪೇಟೆ
ಸಂಪಾದಕರು, ಪೋಸ್ಟ್ಮ್ಯಾನ್ ನ್ಯೂಸ್
🌐 [www.postmannewskannada.com]