w
Headlines
Home » ವಿಶ್ವಕರ್ಮ ಜಯಂತಿ ಕೌಶಲ, ಶ್ರಮ ಹಾಗೂ ಸೃಜನಶೀಲತೆಯ ಪ್ರತೀಕ: ಗಣೇಶ್ ಆಚಾರ್ಯ

ವಿಶ್ವಕರ್ಮ ಜಯಂತಿ ಕೌಶಲ, ಶ್ರಮ ಹಾಗೂ ಸೃಜನಶೀಲತೆಯ ಪ್ರತೀಕ: ಗಣೇಶ್ ಆಚಾರ್ಯ

Screenshot 2026 09 19 16 32 48 161 com.openai.chatgpt edit

ವಿಶ್ವಕರ್ಮ ಜಯಂತಿ ಕೌಶಲ, ಶ್ರಮ ಹಾಗೂ ಸೃಜನಶೀಲತೆಯ ಪ್ರತೀಕ: ಗಣೇಶ್ ಆಚಾರ್ಯ

Vishwakarma Jayanti was celebrated by the Kerehalli Hobli Vishwakarma Samaja at Sri Rama Mandir, highlighting the importance of traditional craftsmanship, skills, hard work and heritage.

ರಿಪ್ಪನ್‌ಪೇಟೆ : ವಿಶ್ವಕರ್ಮ ಜಯಂತಿ ಕೇವಲ ಪರಂಪರೆಯ ಆಚರಣೆಯಲ್ಲ. ಕೌಶಲ, ಶ್ರಮ ಹಾಗೂ ಸೃಜನಶೀಲತೆಯ ಮಹತ್ವವನ್ನು ಸಾರುವ ಪವಿತ್ರ ದಿನವಾಗಿದೆ ಎಂದು ಭದ್ರಾವತಿ ಸರ್ ಎಂ ವಿ ಕಾಲೇಜಿನ ರಸಾಯನಶಾಸ್ತ್ರ ಪ್ರಾಧ್ಯಾಪಕ ಗಣೇಶ್ ಆಚಾರ್ಯ ಹೇಳಿದರು.

ಪಟ್ಟಣದ ಶ್ರೀರಾಮ ಮಂದಿರದಲ್ಲಿ ಕೆರೆಹಳ್ಳಿ ಹೋಬಳಿ ವಿಶ್ವಕರ್ಮ ಸಮಾಜ ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿ
ಹಿಂದೂ ಪರಂಪರೆಯಲ್ಲಿ ವಿಶ್ವಕರ್ಮ ಆಚಾರ್ಯರನ್ನು ದೇವಶಿಲ್ಪಿಯಾಗಿ ಪೂಜಿಸಲಾಗುತ್ತದೆ. ದೇವಾಲಯಗಳು, ನಗರಗಳು, ಶಸ್ತ್ರಾಸ್ತ್ರಗಳು ಹಾಗೂ ಆಭರಣಗಳ ನಿರ್ಮಾಣದಲ್ಲಿ ವಿಶ್ವಕರ್ಮ ಶಿಲ್ಪಿಗಳ ಕೊಡುಗೆ ಮಹತ್ವದ್ದಾಗಿದೆ. ಕಬ್ಬಿಣ, ಮರ, ಚಿನ್ನ–ಬೆಳ್ಳಿ ಕೆಲಸ ಹಾಗೂ ಶಿಲ್ಪಕಲೆ ಸೇರಿದಂತೆ ವಿಶ್ವಕರ್ಮ ಸಮಾಜದ ಸಾಂಪ್ರದಾಯಿಕ ಕಸುಬುಗಳು ಇಂದಿಗೂ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.

ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳಿಲ್ಲದ ಕಾಲದಲ್ಲಿಯೇ ಹೊಯ್ಸಳರು, ಚೋಳರು ಸೇರಿದಂತೆ ವಿವಿಧ ರಾಜವಂಶಗಳ ಅವಧಿಯಲ್ಲಿ ನಿರ್ಮಾಣಗೊಂಡ ಅದ್ಭುತ ದೇವಾಲಯಗಳು ವಿಶ್ವಕರ್ಮ ಶಿಲ್ಪಿಗಳ ಜ್ಞಾನ, ಕೌಶಲ ಹಾಗೂ ತಾಂತ್ರಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ. ಶಿಲ್ಪಿಗಳು ಕೇವಲ ಕಲಾವಿದರಲ್ಲದೆ, ತಂತ್ರಜ್ಞಾನ, ವಾಸ್ತುಶಿಲ್ಪ ಹಾಗೂ ಕೌಶಲವನ್ನು ಸಮನ್ವಯಗೊಳಿಸಿದ ಸೃಜನಶೀಲ ತಂತ್ರಜ್ಞರಾಗಿದ್ದರು ಎಂದು ಗಣೇಶ್ ಆಚಾರ್ಯ ತಿಳಿಸಿದರು.

ಕಾರ್ಯಕ್ರಮಕ್ಕೆ ವಿಶ್ವಕರ್ಮ ಸಮಾಜದ ಶಿವರಾಮ್ ಆಚಾರ್ ಗುಡುಗೋಡು ಅವರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಸಂಘದ ಜಂಟಿ ಕಾರ್ಯದರ್ಶಿ ಚಂದ್ರಾಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜ ಬಾಂಧವರ ನಿರಂತರ ಶ್ರಮ ಹಾಗೂ ಸಹಕಾರದಿಂದ ಕಳೆದ 16 ವರ್ಷಗಳಿಂದ ವಿಶ್ವಕರ್ಮ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸಮಾಜದ ಏಳಿಗೆಗಾಗಿ ಸಂಘ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ಸಂಘದ ಉಪಾಧ್ಯಕ್ಷ ಕೃಷ್ಣಾಚಾರ್ ಮಾತನಾಡಿ, ಸಂಘ ಸ್ಥಾಪನೆಯ ಸಂದರ್ಭದಲ್ಲಿ ಕೆರೆಹಳ್ಳಿ ಹೋಬಳಿಯ ಸಮಾಜ ಬಾಂಧವರ ಮನೆ ಮನೆಗೆ ಭೇಟಿ ನೀಡಿ ಸಂಘವನ್ನು ಸ್ಥಾಪಿಸಲಾಗಿತ್ತು. ಕಳೆದ 16 ವರ್ಷಗಳಿಂದ ಜಯಂತ್ಯೋತ್ಸವವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸಮಾಜ ಬಾಂಧವರ ಇದೇ ರೀತಿಯ ಸಹಕಾರ ಮುಂದುವರಿಯಬೇಕು ಎಂದು ಹೇಳಿದರು.

ಪುಟ್ಟಯ್ಯಚಾರ್ ಮಾತನಾಡಿ, ವಿಶ್ವಕರ್ಮ ಸಮುದಾಯದ ಇತಿಹಾಸ, ಪರಂಪರೆ ಹಾಗೂ ಸಾಧನೆಗಳನ್ನು ಯುವಜನತೆ ಮತ್ತು ಮಕ್ಕಳಿಗೆ ಪರಿಚಯಿಸುವ ಅಗತ್ಯವಿದೆ. ಸಮುದಾಯದ ಯುವಕರು ರಾಜಕೀಯ, ಸಾಂಸ್ಕೃತಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂದರು.
ಬೇಲೂರು, ಹಳೇಬೀಡು, ಬೆಳವಾಡಿ ಹಾಗೂ ಅಮೃತಾಪುರದ ಐತಿಹಾಸಿಕ ದೇವಾಲಯಗಳ ಶಿಲ್ಪಕಲೆ ವಿಶ್ವಕರ್ಮ ಶಿಲ್ಪಿಗಳ ಅಪೂರ್ವ ಪ್ರತಿಭೆಗೆ ಸಾಕ್ಷಿಯಾಗಿದೆ. ಅಮರಶಿಲ್ಪಿ ಜಕಣಾಚಾರಿ ಅವರಂತಹ ಮಹಾನ್ ಶಿಲ್ಪಿಗಳ ಕೊಡುಗೆಯನ್ನು ಸ್ಮರಿಸುವುದರೊಂದಿಗೆ, ಮುಂದಿನ ಪೀಳಿಗೆಯಲ್ಲಿ ಶಿಲ್ಪಕಲೆ ಮತ್ತು ಪರಂಪರೆಯ ಬಗ್ಗೆ ಗೌರವ ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಬಿ. ಶ್ರೀನಿವಾಸಾಚಾರ್, ವಿಶ್ವನಾಥ್ ಆಚಾರ್, ನರಸಿಂಹ ಆಚಾರ್, ಜ್ಯೋತಿ ಪ್ರಕಾಶ್, ಚಂದ್ರಾಚಾರ್, ಸೂರ್ಯನಾರಾಯಣ ಆಚಾರ್ ಹಾಗೂ ಶ್ರೀಧರ ಆಚಾರ್ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.