Breaking
14 Jan 2026, Wed

ಏಕಾಏಕಿ ಜಾರಿಬಿದ್ದ ಬೈಕ್ ಸವಾರರು – ಒಂದೇ ಸ್ಥಳದಲ್ಲಿ ನಡೆದ ಅವಘಡ | ಕಾರಣವೇನು ಗೊತ್ತಾ..!!?

Several two-wheeler riders were injured after losing control on a hazardous stretch of Kuvempu Road near a private hospital in Shivamogga. Traffic police intervened and restored smooth traffic movement.

ಏಕಾಏಕಿ ಜಾರಿಬಿದ್ದ ಬೈಕ್ ಸವಾರರು – ಒಂದೇ ಸ್ಥಳದಲ್ಲಿ ನಡೆದ ಅವಘಡ | ಕಾರಣವೇನು ಗೊತ್ತಾ..!!?

ಶಿವಮೊಗ್ಗ: ನಗರದ ಪ್ರಮುಖ ಮಾರ್ಗವಾದ ಕುವೆಂಪು ರಸ್ತೆಯಲ್ಲಿ ಅಚ್ಚರಿಯೊಂದು ವಾಹನ ಸವಾರರನ್ನು ಬೆಚ್ಚಿಬೀಳುವಂತೆ ಮಾಡಿದೆ. ನಂಜಪ್ಪ ಆಸ್ಪತ್ರೆ ಎದುರಿನ ರಸ್ತೆಗೆ ಪಕ್ಕದ ಮರದಿಂದ ದ್ರವ ರೂಪದ ಅಂಟು ಹರಿದುಬಂದ ಪರಿಣಾಮ, ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಂಡ ಘಟನೆ ನಡೆದಿದೆ.

ಕಳೆದ ರಾತ್ರಿ ಸುರಿದ ಮಳೆಯ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಮಳೆ ನಿಲ್ಲುತ್ತಿದ್ದಂತೆ ಸಂಚಾರ ಆರಂಭಿಸಿದ ಐದಾರು ಬೈಕ್‌ಗಳು ಏಕಾಏಕಿ ನಿಯಂತ್ರಣ ತಪ್ಪಿ ಜಾರಿ ಬಿದ್ದಿವೆ. ಅಂಟು ಮಿಶ್ರಿತ ದ್ರವ ರಸ್ತೆಯ ಮೇಲೆ ಹಬ್ಬಿಕೊಂಡಿದ್ದರಿಂದ ಸವಾರರಿಗೆ ಅಪಾಯ ಎದುರಾದುದು ತಿಳಿದುಬಂದಿದೆ. ಅಪಘಾತದಲ್ಲಿ ಕೆಲವರು ಗಾಯಗೊಂಡಿದ್ದು, ಸ್ಥಳೀಯ ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರು ಗಾಯಾಳುಗಳಿಗೆ ತಕ್ಷಣ ನೆರವು ನೀಡಿದರು.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡರು. ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳು ನಿಧಾನವಾಗಿ ಸಂಚರಿಸುವಂತೆ ಸೂಚಿಸಿದರು. ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ದೇವರಾಜ್ ಅವರು ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದ್ದು, ವಾಟರ್ ಟ್ಯಾಂಕರ್ ಮೂಲಕ ರಸ್ತೆಗೆ ನೀರು ಹಾಯಿಸಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಇದರಿಂದ ರಸ್ತೆ ಮೇಲಿನ ಅಂಟು ತೆಗೆಯಲ್ಪಟ್ಟು ಸಂಚಾರ ಮತ್ತೆ ಸುಗಮಗೊಂಡಿತು.

ಮರದಿಂದ ದ್ರವ ರೂಪದ ಅಂಟು ರಸ್ತೆಗೆ ಬಿದ್ದು ವಾಹನ ಸವಾರರು ಜಾರಿ ಬೀಳುವ ಘಟನೆ ಇದೇ ಮೊದಲಲ್ಲ ಎನ್ನುವುದು ಗಮನಾರ್ಹ. 2021ರಲ್ಲಿಯೂ ಇದೇ ಪ್ರದೇಶದಲ್ಲಿ ಬೆಳಿಗ್ಗೆ ಸಮಯದಲ್ಲಿ ಹಲವು ವಾಹನಗಳು ಜಾರಿ ಬಿದ್ದು ಸವಾರರು ಗಾಯಗೊಂಡ ಘಟನೆ ವರದಿಯಾಗಿತ್ತು. ಮರುಮರು ಇಂತಹ ಘಟನೆಗಳು ನಡೆಯುತ್ತಿರುವುದರಿಂದ, ಸಂಬಂಧಪಟ್ಟ ಇಲಾಖೆಗಳು ಶಾಶ್ವತ ಪರಿಹಾರಕ್ಕೆ ಮುಂದಾಗಬೇಕೆಂಬ ಸಾರ್ವಜನಿಕರ ಒತ್ತಾಯ ಕೇಳಿಬರುತ್ತಿದೆ.

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್