A tragic road accident at Bharatipura Cross in Tirthahalli taluk claimed three lives including a child after a Swift car collided with a KSRTC bus. Three others were seriously injured.
ತೀರ್ಥಹಳ್ಳಿಯ ಭಾರತೀಪುರ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ: ನಾಲ್ವರು ಸಾವು
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಭಾರತೀಪುರದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರಿನ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ.
ಮೃತರನ್ನು ಫಾತೀಮಾ (70), ರಿಹಾನ್ (14), ರಾಹಿಲ್ (9) ಮತ್ತು ಜಯಾನ್ (14) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ರಾಯಚೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಎದುರಿನಿಂದ ಬಂದ ಕಾರು ಓವರ್‌ಟೇಕ್ ಮಾಡಲು ಪ್ರಯತ್ನಿಸಿದ ವೇಳೆ ಅತೀವೇಗವಾಗಿ ಡಿಕ್ಕಿ ಹೊಡೆದಿದ್ದೇ ಈ ದುರ್ಘಟನೆಗೆ ಕಾರಣವೆಂದು ತಿಳಿದುಬಂದಿದೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ 70 ವರ್ಷದ ಫಾತೀಮಾ ಹಾಗೂ 14 ವರ್ಷದ ರಿಹಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ 9 ವರ್ಷದ ರಾಹಿಲ್ ಮತ್ತು 14 ವರ್ಷದ ಜಯಾನ್ ಅವರನ್ನು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರೆಲ್ಲರೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೇಣಸೇ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ಇತರ ಪ್ರಯಾಣಿಕರಾದ ಝರೀನಾ (35), ರಿಹಾ (12) ಹಾಗೂ ಕಾರು ಚಾಲಕ ಜಯಾನ್ ಅವರಿಗೆ ಗಾಯಗಳಾಗಿದ್ದು, ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.











