Headlines

ಪೊಲೀಸ್ ಠಾಣೆಯೊಳಗೇ ನೇಣಿಗೆ ಶರಣಾದ ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್

ಶಿವಮೊಗ್ಗದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಮೊಹಮದ್ ಝಕ್ರಿಯ ಅವರು ಠಾಣೆಯೊಳಗೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡರಾತ್ರಿ ನಡೆದಿದೆ.

ಪೊಲೀಸ್ ಠಾಣೆಯೊಳಗೇ ನೇಣಿಗೆ ಶರಣಾದ ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್

ಶಿವಮೊಗ್ಗ | ಜನವರಿ 8..  ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ಪಕ್ಕದಲ್ಲಿರುವ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಠಾಣೆಯೊಳಗೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡರಾತ್ರಿ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಹೆಡ್ ಕಾನ್ಸ್‌ಟೇಬಲ್ ಮೊಹಮದ್ ಝಕ್ರಿಯ (55) ಎಂದು ಗುರುತಿಸಲಾಗಿದೆ. ಅವರು ಕಳೆದ ಕೆಲವು ದಿನಗಳಿಂದ ರಜೆಯಲ್ಲಿದ್ದು, ಮೂರು ದಿನಗಳ ಹಿಂದಷ್ಟೇ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಝಕ್ರಿಯ ಅವರು ಮಂಗಳವಾರ ರಾತ್ರಿ ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಸಂಚಾರ ಕರ್ತವ್ಯ ಮುಗಿಸಿಕೊಂಡು ಠಾಣೆಗೆ ವಾಪಸ್ಸಾಗಿದ್ದರು. ಬಳಿಕ ಠಾಣೆಯ ಹಿಂಭಾಗದಲ್ಲಿರುವ ಸೆಲ್‌ಗಳಿರುವ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತರ ಕುಟುಂಬಸ್ಥರು ಕೂಡ ಠಾಣೆಗೆ ಆಗಮಿಸಿದ್ದಾರೆ.
ಘಟನೆಯ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದ್ದು, ಸಂಬಂಧಪಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಶಿವಮೊಗ್ಗ ಪೊಲೀಸ್ ಸುದ್ದಿ
ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ
ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ
Shivamogga Police News