w
Headlines
Home » ರೈತರ ಜಮೀನಿನಲ್ಲಿ ಬೋರ್‌ವೆಲ್‌ಗೆ ತಡೆ: ಹರತಾಳು ಹಾಲಪ್ಪ–ಶಾರದಾ ಪೂರ್ಯಾನಾಯ್ಕ ಮಧ್ಯಪ್ರವೇಶ

ರೈತರ ಜಮೀನಿನಲ್ಲಿ ಬೋರ್‌ವೆಲ್‌ಗೆ ತಡೆ: ಹರತಾಳು ಹಾಲಪ್ಪ–ಶಾರದಾ ಪೂರ್ಯಾನಾಯ್ಕ ಮಧ್ಯಪ್ರವೇಶ

GridArt 20260223

Farmers in Revachikoppa village near Kumsi protested after Forest Department officials stopped borewell drilling on agricultural land, leading to intervention by BJP leaders and talks over land record confusion.

ಕುಂಸಿ ತಾಲ್ಲೂಕಿನ ಸಮೀಪದ ರೇವಚಿಕೊಪ್ಪ (ರೇಚಿಕೊಪ್ಪ) ಗ್ರಾಮದಲ್ಲಿ ರೈತರ ಜಮೀನಿನಲ್ಲಿ ಕೊಳವೆ ಬಾವಿ (ಬೋರ್‌ವೆಲ್) ಕೊರೆಯಲು ಮುಂದಾದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸಿದ ಘಟನೆ ಸೋಮವಾರ ನಡೆದಿದೆ. ಇದರಿಂದಾಗಿ ಗ್ರಾಮಸ್ಥ ರೈತರು ಅರಣ್ಯ ಇಲಾಖೆಯ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ರೈತ ಕೇಶವ ಹೊಸಕೊಪ್ಪ ಅವರು ತಮ್ಮ ಕೃಷಿ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯುತ್ತಿದ್ದ ಸಂದರ್ಭದಲ್ಲೇ ಆಯನೂರು ಉಪವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬಾವಿ ಕೊರೆಯದಂತೆ ತಡೆದಿದ್ದಾರೆ. ರೈತರು ಹಕ್ಕುಪತ್ರ ಹಾಗೂ ಜಮೀನಿನ ಖಾತೆ ಹೊಂದಿದ್ದರೂ ಈ ರೀತಿ ಅಡ್ಡಿಪಡಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ದಬ್ಬಾಳಿಕೆ ಮುಂದುವರಿದರೆ ಹೋರಾಟ ಅನಿವಾರ್ಯ ಎಂದು ರೈತರು ಎಚ್ಚರಿಕೆ ನೀಡಿದರು.

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಘಟಕ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ಹಾಗೂ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಮಾತನಾಡಿದ ಹರತಾಳು ಹಾಲಪ್ಪ, “ಶರಾವತಿ ಮುಳುಗಡೆ ಸಂತ್ರಸ್ಥರೇ ಹೆಚ್ಚಿರುವ ಈ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅನಾವಶ್ಯಕವಾಗಿ ಕಿರಿ-ಕಿರಿ ನೀಡುತ್ತಿರುವುದು ಸರಿಯಲ್ಲ. ಬೇಸಿಗೆ ಆರಂಭವಾಗುತ್ತಿದ್ದು, ರೈತರು ಬೆಳೆದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಳವೆ ಬಾವಿ ಅವಶ್ಯಕತೆ ಅನಿವಾರ್ಯ. ರೈತರಿಗೆ ತೊಂದರೆ ನೀಡುವುದನ್ನು ಸಹಿಸುವುದಿಲ್ಲ,” ಎಂದು ಎಚ್ಚರಿಸಿದರು.

ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, “ರೈತರು ತಮ್ಮ ಜಮೀನಿನ ದಾಖಲೆಗಳನ್ನು ಹೊಂದಿದ್ದರೂ ಕೊಳವೆ ಬಾವಿ ಕೊರೆಯಲು ಅಡ್ಡಿಪಡಿಸುವುದು ತಪ್ಪು. ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ನೀರು ಅಗತ್ಯ. ಬೇಸಿಗೆಯಲ್ಲಿ ಬೆಳೆ ಉಳಿಸಿಕೊಳ್ಳಲು ರೈತರು ಹೋರಾಡುತ್ತಿರುವಾಗ ಇಲಾಖೆ ಅಡ್ಡಿಯಾಗಬಾರದು,” ಎಂದು ಸ್ಪಷ್ಟಪಡಿಸಿದರು.

ರೇಚಿಕೊಪ್ಪ ಗ್ರಾಮದ ಸರ್ವೇ ನಂಬರ್ 201ರಲ್ಲಿ ಕೊಳವೆ ಬಾವಿ ಕೊರೆಯಲಾಗುತ್ತಿತ್ತು. ಈ ಜಾಗ ಅರಣ್ಯ ವ್ಯಾಪ್ತಿಗೆ ಬರುತ್ತದೆ ಎಂಬ ದಾಖಲೆಗಳನ್ನು ಉಲ್ಲೇಖಿಸಿ ಅರಣ್ಯ ಇಲಾಖೆ ಅಧಿಕಾರಿಗಳು ತಡೆದಿದ್ದರು. ಆದರೆ, ದಾಖಲೆಗಳಲ್ಲೇ ಗೊಂದಲ ಇರುವುದನ್ನು ಗಮನಕ್ಕೆ ತಂದ ಬಳಿಕ, ಸಣ್ಣ-ಪುಟ್ಟ ವ್ಯತ್ಯಾಸಗಳಿವೆ ಎಂದು ಒಪ್ಪಿಕೊಂಡ ಅಧಿಕಾರಿಗಳು ಕೊಳವೆ ಬಾವಿ ಕೊರೆಯಲು ಅವಕಾಶ ನೀಡಬಹುದೆಂದು ತಿಳಿಸಿದ್ದಾರೆ ಎಂದು ಹರತಾಳು ಹಾಲಪ್ಪ ಮಾಹಿತಿ ನೀಡಿದರು.

“60-70 ವರ್ಷಗಳಿಂದ ರೈತರು ಈ ಭಾಗದಲ್ಲಿ ವಾಸವಿದ್ದು, ರಸ್ತೆ, ವಿದ್ಯುತ್, ಸಾರಿಗೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳು ಇಲ್ಲಿ ಇವೆ. ಸರ್ಕಾರವೇ ಶರಾವತಿ ಮುಳುಗಡೆ ರೈತರನ್ನು ಇಲ್ಲಿ ಪುನರ್ವಸತಿ ಮಾಡಿದೆ. ಆಧಾರ್, ಮತದಾನ ಹಕ್ಕು ಸೇರಿದಂತೆ ಎಲ್ಲಾ ಸೌಲಭ್ಯಗಳು ದೊರಕಿವೆ. ಇದಕ್ಕಿಂತ ಹೆಚ್ಚಿನ ದಾಖಲೆ ಏನು ಬೇಕು? ಅರಣ್ಯ ಇಲಾಖೆ ರೈತರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು,” ಎಂದು ಹರತಾಳು ಹಾಲಪ್ಪ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.