Headlines

ರಿಪ್ಪನ್‌ಪೇಟೆ ರೋಟರಿ ಕ್ಲಬ್‌ಗೆ 9 ಜಿಲ್ಲಾ ಪ್ರಶಸ್ತಿಗಳ ಗೌರವ

ರಿಪ್ಪನ್‌ಪೇಟೆ ರೋಟರಿ ಕ್ಲಬ್‌ಗೆ 9 ಜಿಲ್ಲಾ ಪ್ರಶಸ್ತಿಗಳ ಗೌರವ

ರೋಟರಿ ಜಿಲ್ಲಾ 3182ರ ವಲಯ–11ಕ್ಕೆ ಸೇರಿದ ರಿಪ್ಪನ್‌ಪೇಟೆ ರೋಟರಿ ಕ್ಲಬ್‌ಗೆ 2024–25ನೇ ಸಾಲಿನಲ್ಲಿ ಒಟ್ಟು 9 ಜಿಲ್ಲಾ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಈ ಕುರಿತು ಕ್ಲಬ್ ಅಧ್ಯಕ್ಷ ಕೆರೆಹಳ್ಳಿ ರಾಮಚಂದ್ರ ಅವರು ರಿಪ್ಪನ್‌ಪೇಟೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರೋಟರಿ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಾಜಸೇವೆಗೆ ಬದ್ಧವಾದ ಸಂಸ್ಥೆಯಾಗಿದ್ದು, ಕಳೆದ ಒಂದು ವರ್ಷದಲ್ಲಿ ರಿಪ್ಪನ್‌ಪೇಟೆ ರೋಟರಿ ಕ್ಲಬ್ ಸಮಾಜಮುಖಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡಿದೆ. ಉಚಿತ ನೇತ್ರ ಶಿಬಿರ, ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ, ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ, ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ, ರೈತಮಿತ್ರ ಕಾರ್ಯಕ್ರಮ ಸೇರಿದಂತೆ ಹಲವು ಸಮಾಜಮುಖಿ ಚಟುವಟಿಕೆಗಳಿಂದ ಈ ಗೌರವ ದೊರೆತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ 3182ರ ವಲಯ–11ರ ಅಸಿಸ್ಟೆಂಟ್ ಗವರ್ನರ್ ಎಂ.ಬಿ. ಲಕ್ಷ್ಮಣಗೌಡ ಮಾತನಾಡಿ, “ರಿಪ್ಪನ್‌ಪೇಟೆ ರೋಟರಿ ಸಂಸ್ಥೆ ಸ್ಥಾಪನೆಯಾದ 15 ವರ್ಷಗಳಿಂದ ನೂರಾರು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವುದು, ಬಡಜನರ ಆರೋಗ್ಯಕ್ಕಾಗಿ ಉಚಿತ ಶಿಬಿರಗಳನ್ನು ಆಯೋಜಿಸುವುದು, ರೈತರಿಗಾಗಿ ಕೃಷಿ ಸಂಬಂಧಿತ ಕಾರ್ಯಕ್ರಮಗಳನ್ನು ರೂಪಿಸುವುದು ನಮ್ಮ ಪ್ರಮುಖ ಕಾರ್ಯಗಳಾಗಿವೆ. ಇದೇ ಕಾರಣಕ್ಕೆ ಈ ಬಾರಿ ನಮ್ಮ ರೋಟರಿ ಸಂಸ್ಥೆಗೆ 9 ಜಿಲ್ಲಾ ಪ್ರಶಸ್ತಿಗಳ ಗೌರವ ದೊರೆತಿದೆ” ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್‌ನ ಗಣೇಶ್ ಕಾಮತ್, ರಾಧಾಕೃಷ್ಣ ಹೆಚ್.ಎ., ರಾಧಾಕೃಷ್ಣ ಜೆ., ಡಾಕಪ್ಪ, ಹುಗುಡಿ ವರ್ತೇಶ್ ಗೌಡ, ಗಣೇಶ್ ಆರ್., ಸಬಾಸ್ಟಿನ್ ಮತ್ತಿತರರು ಉಪಸ್ಥಿತರಿದ್ದರು.