Headlines

ಗೌರಿ-ಗಣೇಶ – ಈದ್ ಮಿಲಾದ್ ಹಬ್ಬ ಸೌಹಾರ್ದದಿಂದ ಆಚರಿಸೋಣ : ಎಸ್‌ಪಿ ಮಿಥನ್ ಕುಮಾರ್ ಕರೆ

ಗೌರಿ-ಗಣೇಶ – ಈದ್ ಮಿಲಾದ್ ಹಬ್ಬ ಸೌಹಾರ್ದದಿಂದ ಆಚರಿಸೋಣ : ಎಸ್‌ಪಿ ಮಿಥನ್ ಕುಮಾರ್ ಕರೆ

ರಿಪ್ಪನ್‌ಪೇಟೆ: ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಪರಸ್ಪರ ಗೌರವದಿಂದ ಹಾಗೂ ಸೌಹಾರ್ದತೆಯಿಂದ ಆಚರಿಸುವ ಮೂಲಕ ಗ್ರಾಮದಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥನ್ ಕುಮಾರ್ ಕರೆ ನೀಡಿದರು.

ಇಂದು ರಿಪ್ಪನ್‌ಪೇಟೆಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು. ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಎಸ್‌ಪಿ ಮಾತನಾಡಿ, “ಧರ್ಮ ಎಲ್ಲರಿಗೂ ಶ್ರೇಷ್ಟ. ಆದರೆ ಧರ್ಮದ ಹೆಸರಿನಲ್ಲಿ ವಿಭಜನೆ ಬೇಡ. ಪರಸ್ಪರದ ಹಬ್ಬದಲ್ಲಿ ಪಾಲ್ಗೊಂಡು ಭಾವೈಕ್ಯತೆಯನ್ನು ಬೆಳೆಸಬೇಕು. ಅದುವೇ ನಿಜವಾದ ಸಂಭ್ರಮ” ಎಂದು ಹೇಳಿದರು.

ರಿಪ್ಪನ್ ಪೇಟೆಯಲ್ಲಿ ಎಲ್ಲರೂ ಅನ್ಯೋನ್ಯ ರೀತಿಯಲ್ಲಿ ತಮ್ಮ ತಮ್ಮ ಹಬ್ಬಗಳನ್ನು ಆಚರಿಸಿಕೊಳ್ಳುತ್ತಿರುವುದು ಎಲರಿಗೂ ಮಾದರಿಯಾಗಿದೆ.ನಮ್ಮ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ ಅವರು ಎಂತಹ ಸಂಧರ್ಭಗಳಲ್ಲಿಯೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದರು.

ಗಣಪತಿ ಪೆಂಡಾಲ್ ಹತ್ತಿರ ಮತ್ತು ವಿಸರ್ಜನೆ ಮೆರವಣಿಗೆಯ ಸಮಯದಲ್ಲಿ ಎಚ್ಚರಿಕೆ ವಹಿಸಲು ಹೇಳಿದರು. ಯಾವುದೇ ಅಶಾಂತಿ ಕಂಡುಬಂದರೆ ತಕ್ಷಣವೇ ಪೊಲೀಸರ ಗಮನಕ್ಕೆ ತರುವಂತೆ ಸೂಚಿಸಿದರು. ಜೊತೆಗೆ ಅನುಭವ ಹೊಂದಿರುವ ಸದಸ್ಯರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ಮುಖಂಡರಾದ ಆರ್.ಎ. ಚಾಬುಸಾಬ್, ಎಂ.ಬಿ. ಮಂಜುನಾಥ,ಸುರೇಶ್ ಸಿಂಗ್ , ಆರ್ ರಾಘವೇಂದ್ರ ,ಆಸೀಫ಼್ ಭಾಷಾ ,ನಿರೂಪ್ ಕುಮಾರ್ ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ, ಭಾಗವಹಿಸಿ ಮಾತನಾಡಿದರು.

ಸಭೆಯಲ್ಲಿ ಹಿಂದೂ ಮಹಾಸಭಾ ಅಧ್ಯಕ್ಷ ಸುಧೀರ್ ಪಿ , ಈದ್ ಮಿಲಾದ್ ಸಮಿತಿ ಅಧ್ಯಕ್ಷ ಅಫ಼್ಜಲ್ ಬ್ಯಾರಿ , ಟಿ ಆರ್ ಕೃಷ್ಣಪ್ಪ ,ರವೀಂದ್ರ ಕೆರೆಹಳ್ಳಿ ಹಾಗೂ ಇನ್ನಿತರರು ಇದ್ದರು‌

ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ, ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಹೆಬ್ಬಾಳ್, ಪಿಎಸ್‌ಐ ರಾಜುರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.

ಹಿಂದೂ ಮಹಾಸಭಾ ವತಿಯಿಂದ ಜಿಲ್ಲಾ ರಕ್ಷಾಣಾಧಿಕಾರಿಗಳಿಗೆ ಸನ್ಮಾನ

ಶಾಂತಿ ಸಭೆಯ ಹಿನ್ನಲೆಯಲ್ಲಿ ರಿಪ್ಪನ್ ಪೇಟೆಗೆ ಆಗಮಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್ ಕುಮಾರ್ ರವರು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯವರು ಆಯೋಜಿಸಿರುವ 58ನೇ ವರ್ಷದ ಗಣೇಶೋತ್ಸವದ ಪೊರ್ವ ತಯಾರಿಯನ್ನು ವೀಕ್ಷಿಸಲು ಭೂಫಾಳಂ ಚಂದ್ರಶೇಖರಯ್ಯ ಸಭಾಂಗಣಕ್ಕೆ ಆಗಮಿಸಿದರು.

ಈ ಸಂಧರ್ಭದಲ್ಲಿ ರಿಪ್ಪನ್ ಪೇಟೆ ಹಿಂದೂ ಮಹಾಸಭಾ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.