POSTMAN NEWS

ನೈಜ ಸುದ್ದಿ ನೇರ ಬಿತ್ತರ..

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರನಿಗೆ ಒಂದು ಪುತ್ಥಳಿ ನಿರ್ಮಿಸಲು ‘ಫಂಡ್’ ಇಲ್ಲವೇ? ಅಥವಾ ‘ಮನಸ್ಸು’ ಇಲ್ಲವೇ?”

GridArt 20260211

One year after his martyrdom, Indian Air Force Warrant Officer Manjunath GS is yet to receive a memorial. Parents and villagers allege government neglect and demand justice.

ಒಂದು ವರ್ಷವಾಯ್ತು, ಪುತ್ಥಳಿ ಎಲ್ಲಿ? ಶಿವಮೊಗ್ಗದ ಹುತಾತ್ಮ ಮಂಜುನಾಥ್ ಅವರಿಗೆ ಸರ್ಕಾರ ಮಾಡಿದ ದ್ರೋಹದ ಕರಾಳ ಸತ್ಯ.”

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರನಿಗೆ ಒಂದು ಪುತ್ಥಳಿ ನಿರ್ಮಿಸಲು ‘ಫಂಡ್’ ಇಲ್ಲವೇ? ಅಥವಾ ‘ಮನಸ್ಸು’ ಇಲ್ಲವೇ?”

ಹುತಾತ್ಮ ಮಂಜುನಾಥ್ ಅವರಿಗೆ ಸರ್ಕಾರ ಕೊಟ್ಟ ಮಾತೇನಾಯ್ತು? ಶಿವಮೊಗ್ಗದ ಜನಪ್ರತಿನಿಧಿಗಳೇ, ಉತ್ತರಿಸಿ!”

ಶಿವಮೊಗ್ಗ: ದೇಶದ ಗಡಿ ಕಾಯುವ ಸೈನಿಕನೊಬ್ಬ ಪ್ರಾಣತ್ಯಾಗ ಮಾಡಿದಾಗ ಇಡೀ ದೇಶವೇ ಕಂಬನಿ ಮಿಡಿಯುತ್ತದೆ. “ನಿನ್ನ ತ್ಯಾಗಕ್ಕೆ ನಾವೆಂದೂ ಚಿರಋಣಿ” ಎಂದು ರಾಜಕಾರಣಿಗಳು ಸಾಲು ಸಾಲಾಗಿ ಬಂದು ಕಣ್ಣೀರು ಹಾಕುತ್ತಾರೆ. ಆದರೆ, ಆ ಕಣ್ಣೀರು ಒಣಗುವ ಮುನ್ನವೇ ಹುತಾತ್ಮನ ತ್ಯಾಗವನ್ನು ಮರೆತುಬಿಡುವುದು ಎಂತಹ ದುರಂತ?

ಹೌದು ಶಿವಮೊಗ್ಗ ಜಿಲ್ಲೆಯ ಸಂಕೂರು ಗ್ರಾಮದ ವೀರಪುತ್ರ, ಭಾರತೀಯ ವಾಯುಪಡೆಯ ವಾರಂಟ್ ಆಫೀಸರ್ ಮಂಜುನಾಥ್ ಜಿ.ಎಸ್. ಅವರ ವಿಷಯದಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ತೋರುತ್ತಿರುವ ವರ್ತನೆ ಇದಕ್ಕೆ ಜ್ವಲಂತ ಸಾಕ್ಷಿ. ಇದು ಕೇವಲ ನಿರ್ಲಕ್ಷ್ಯವಲ್ಲ, ಇದೊಂದು ವ್ಯವಸ್ಥಿತವಾದ ‘ದೇಶದ್ರೋಹ’ಕ್ಕೆ ಸಮಾನವಾದ ದ್ರೋಹ!

​ಒಂದು ವರ್ಷ ಕಳೆದರೂ ಈಡೇರದ ಭರವಸೆಗಳು: ಸರ್ಕಾರಕ್ಕೆ ನಾಚಿಕೆಯಾಗುವುದಿಲ್ಲವೇ?

​ಭಾರತೀಯ ವಾಯುಪಡೆಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ್, ಸ್ಕೈಡೈವಿಂಗ್ ತರಬೇತಿಯ ವೇಳೆ ಪ್ಯಾರಾಚೂಟ್ ವಿಫಲಗೊಂಡು 13,000 ಅಡಿ ಎತ್ತರದಿಂದ ಬಿದ್ದು ದೇಶಸೇವೆಯಲ್ಲೇ ಪ್ರಾಣಬಿಟ್ಟರು. ಆ ಘಟನೆ ನಡೆದು ಒಂದು ವರ್ಷ ಉರುಳಿದೆ. ಅಂದು ಅವರ ಅಂತ್ಯಕ್ರಿಯೆಗೆ ಬಂದಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳು ನೀಡಿದ್ದ ಭರವಸೆಗಳ ಪಟ್ಟಿ ಹನುಮಂತನ ಬಾಲದಂತಿತ್ತು.

​”ಹೊಸನಗರ ಪಟ್ಟಣದ ಪ್ರಮುಖ ವೃತ್ತದಲ್ಲಿ ಹುತಾತ್ಮನ ಮಂಜುನಾಥ್ ರವರ ಬೃಹತ್ ಪುತ್ಥಳಿ ನಿರ್ಮಿಸುತ್ತೇವೆ.”

​”ಸರ್ಕಾರಿ ಶಾಲೆಯ ನೂತನ ಕೊಠಡಿಗೆ ಮಂಜುನಾಥ್ ಅವರ ಹೆಸರಿಡುತ್ತೇವೆ.”

​” ಊರಿನ ಪ್ರಮುಖ ರಸ್ತೆಗೆ ವೀರಯೋಧನ ನಾಮಕರಣ ಮಾಡುತ್ತೇವೆ.”

ಸಂಕೂರು ಗ್ರಾಮದಲ್ಲಿ ಮಂಜುನಾಥ್ ಅವರ ತಂದೆತಾಯಿ ತಮ್ಮ ಮನೆ ಮುಂಭಾಗದ ಸ್ವಂತ ಜಾಗದಲ್ಲಿ ಹುತಾತ್ಮ ಮಗನ ಸ್ಮಾರಕವನ್ನು ಕಟ್ಟಿ ಪ್ರತಿನಿತ್ಯ ಬೆಳಿಗ್ಗೆ ತನ್ನ ಕರುಳಕುಡಿಯನ್ನು ನೋಡುತ್ತಾ ತಮ್ಮ ಜೀವನ ಸಾಗಿಸುತಿದ್ದರೆ.

ಅಂದು ಸರ್ಕಾರ ನೀಡಿದ್ದ ಭರವಸೆಗಳು ಎಲ್ಲಿವೆ? ಒಂದು ವರ್ಷ ಕಳೆದರೂ ಒಂದು ಪುತ್ಥಳಿ ನಿರ್ಮಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರೆ, ಇವರಿಗೆ ದೇಶಪ್ರೇಮದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಪುತ್ಥಳಿ ನಿರ್ಮಾಣಕ್ಕೆ ಬೇಕಾಗಿರುವುದು ಇಚ್ಛಾಶಕ್ತಿಯೇ ಹೊರತು ಬರೀ ಹಣವಲ್ಲ. ಆಡಳಿತ ಯಂತ್ರಕ್ಕೆ ತುಕ್ಕು ಹಿಡಿದಿದೆಯೇ ಅಥವಾ ಹುತಾತ್ಮರ ತ್ಯಾಗ ಇವರಿಗೆ ಕೇವಲ ಚುನಾವಣಾ ಸರಕೇ? ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ವೃದ್ಧ ತಂದೆ-ತಾಯಿಯ ಪರದಾಟ: ಇದೇನಾ ದೇಶಸೇವಕನ ಕುಟುಂಬಕ್ಕೆ ನೀಡುವ ಗೌರವ?

​ಎಲ್ಲಕ್ಕಿಂತ ಮನಕಲುಕುವ ವಿಚಾರವೆಂದರೆ, ದೇಶಕ್ಕೆ ಮಗನನ್ನು ದಾನ ಮಾಡಿದ ಆ ವೃದ್ಧ ತಂದೆ-ತಾಯಂದಿರ ಇಂದಿನ ಸ್ಥಿತಿ. ಮಗನ ಅಗಲಿಕೆಯ ನೋವಿನಲ್ಲಿರುವ ಆ ಜೀವಗಳಿಗೆ ನೆಮ್ಮದಿಯಿಂದ ಒಂದು ತುತ್ತು ಅನ್ನ ತಿನ್ನಲೂ ಈ ವ್ಯವಸ್ಥೆ ಬಿಡುತ್ತಿಲ್ಲ. ಪರಿಹಾರದ ಹಣಕ್ಕಾಗಿ ಮಂಜುನಾಥ್ ಅವರ ಪತ್ನಿ, ಅತ್ತೆ-ಮಾವನ ವಿರುದ್ಧವೇ ದಾವೆ ಹೂಡಿದ್ದಾರೆ ಎಂಬ ಸುದ್ದಿ ಎಂತಹ ಕಲ್ಲುಹೃದಯವನ್ನೂ ಕರಗಿಸುತ್ತದೆ.

​ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಆ ಹಿರಿಯ ಜೀವಗಳು, ನ್ಯಾಯಕ್ಕಾಗಿ ತಿಂಗಳಿಗೊಮ್ಮೆ ದೆಹಲಿ ಮತ್ತು ಆಗ್ರಾ ನಗರದ ಕೋರ್ಟ್ ಮೆಟ್ಟಿಲೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶಕ್ಕಾಗಿ ಪ್ರಾಣಕೊಟ್ಟ ಮಗನ ಫೋಟೋಗೆ ಹೂವು ಏರಿಸಬೇಕಾದ ಕೈಗಳು, ಇಂದು ವಕೀಲರ ಫೈಲ್ ಹಿಡಿದು ಅಲೆದಾಡುತ್ತಿವೆ. ಈ ದಯನೀಯ ಸ್ಥಿತಿ ಕಂಡು ಕರುಳು ಚುರುಕ್ ಎನ್ನದಿದ್ದರೆ ನಾವು ಮನುಷ್ಯರೇ ಅಲ್ಲ.

​ಜಿಲ್ಲಾಡಳಿತ ಎಲ್ಲಿದೆ? ಸೈನಿಕ ಕಲ್ಯಾಣ ಮಂಡಳಿ ಏನು ಮಾಡುತ್ತಿದೆ? ಒಬ್ಬ ಹುತಾತ್ಮನ ಪೋಷಕರು ಬೀದಿಗೆ ಬಿದ್ದು ಅಲೆದಾಡುತ್ತಿರುವಾಗ, ಸ್ಥಳೀಯ ಜನಪ್ರತಿನಿಧಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಳಿತಿದ್ದಾರೆಯೇ? ಇದು ಕೇವಲ ಮಂಜುನಾಥ್ ಅವರ ಕುಟುಂಬದ ಸಮಸ್ಯೆಯಲ್ಲ, ಇದು ದೇಶಕ್ಕಾಗಿ ಹೋರಾಡುವ ಪ್ರತಿಯೊಬ್ಬ ಸೈನಿಕನ ಮನಸ್ಥೈರ್ಯವನ್ನು ಕುಗ್ಗಿಸುವ ಹೀನ ಕೃತ್ಯ.

​ವೇದಿಕೆಯ ದೇಶಭಕ್ತಿ ಬೇಕಿಲ್ಲ: ಕೃತಿಯಲ್ಲಿ ತೋರಿಸಿ!

​ಸ್ವಾತಂತ್ರ್ಯ ದಿನಾಚರಣೆಯಂದು, ಗಣರಾಜ್ಯೋತ್ಸವದಂದು ಉದ್ದುದ್ದ ಭಾಷಣ ಬಿಗಿಯುವ ನಾಯಕರೆ, ನಿಮ್ಮ ದೇಶಭಕ್ತಿ ಕೇವಲ ಮೈಕ್ ಮುಂದೆ ಮಾತ್ರ ಸೀಮಿತವೇ? ಹುತಾತ್ಮನೊಬ್ಬನ ಸ್ಮರಣಾರ್ಥ ಒಂದು ಪುತ್ಥಳಿ ನಿಲ್ಲಿಸಲು ನಿಮಗೆ ವರ್ಷಗಟ್ಟಲೆ ಸಮಯ ಬೇಕೆ? ಇದು ಆಡಳಿತಾತ್ಮಕ ವಿಳಂಬವಲ್ಲ, ಇದು ಸ್ಪಷ್ಟವಾದ ಅಗೌರವ.

ಪುತ್ಥಳಿಗಳು ಕೇವಲ ಕಾಂಕ್ರೀಟ್ ರಚನೆಗಳಲ್ಲ; ಅವು ಮುಂದಿನ ಪೀಳಿಗೆಗೆ ತ್ಯಾಗ, ಬಲಿದಾನ ಮತ್ತು ದೇಶಪ್ರೇಮದ ಪಾಠ ಹೇಳುವ ಮೂಕ ಗುರುಗಳು. ಆ ಗುರುವನ್ನು ಮರೆಮಾಚುವ ಮೂಲಕ ನೀವು ಮುಂದಿನ ಪೀಳಿಗೆಗೆ ಯಾವ ಸಂದೇಶ ನೀಡುತ್ತಿದ್ದೀರಿ?

​ಇದು ಅಂತಿಮ ಎಚ್ಚರಿಕೆ

​ಹುತಾತ್ಮ ಮಂಜುನಾಥ್ ಜಿ.ಎಸ್. ಅವರ ತ್ಯಾಗಕ್ಕೆ ಸರಿಯಾದ ಗೌರವ ಸಿಗಲೇಬೇಕು.

ತಕ್ಷಣವೇ ಹೊಸನಗರದಲ್ಲಿ ಗೌರವಯುತವಾದ ಪುತ್ಥಳಿ ನಿರ್ಮಾಣವಾಗಬೇಕು.

​ಶಾಲಾ-ರಸ್ತೆಗಳಿಗೆ ನಾಮಕರಣ ಮಾಡುವ ಪ್ರಕ್ರಿಯೆ ಕೂಡಲೇ ಮುಗಿಯಬೇಕು.

​ವೃದ್ಧ ಪೋಷಕರಿಗೆ ಆಗುತ್ತಿರುವ ಕಾನೂನು ಕಿರುಕುಳ ತಪ್ಪಿಸಲು ಸರ್ಕಾರ ಮಧ್ಯಪ್ರವೇಶಿಸಿ, ಅವರಿಗೆ ಗೌರವಯುತ ಜೀವನ ಕಲ್ಪಿಸಬೇಕು.

​ಇದು ಮನವಿಯಲ್ಲ, ಇದು ಹಕ್ಕೊತ್ತಾಯ. ಸರ್ಕಾರ ಈಗಲೂ ಕಣ್ಣು ತೆರೆಯದಿದ್ದರೆ, ಸಂಕೂರು ಗ್ರಾಮದಿಂದ ಆರಂಭವಾಗುವ ಈ ಕಿಡಿ, ಇಡೀ ರಾಜ್ಯಾದ್ಯಂತ ಜನಾಕ್ರೋಶದ ಜ್ವಾಲೆಯಾಗಿ ಹಬ್ಬುವುದರಲ್ಲಿ ಸಂಶಯವಿಲ್ಲ.

ಬೇಸರದಿಂದ…
ರಫಿ ರಿಪ್ಪನ್ ಪೇಟೆ

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.