w
Headlines
Home » “ನಗುನಗುತ್ತಲೇ ಫೋಟೋಗೆ ಪೋಸ್ ಕೊಟ್ಟಿದ್ದವನು ಮರುಕ್ಷಣವೇ ಬಾರದ ಲೋಕಕ್ಕೆ ಪಯಣಿಸಿದ!” – ಉಲ್ಲಾಸ್ ಗೌಡ ಸ್ನೇಹಿತ ಘಟನೆ ಬಗ್ಗೆ ಹೇಳಿದ್ದೇನು.!?

“ನಗುನಗುತ್ತಲೇ ಫೋಟೋಗೆ ಪೋಸ್ ಕೊಟ್ಟಿದ್ದವನು ಮರುಕ್ಷಣವೇ ಬಾರದ ಲೋಕಕ್ಕೆ ಪಯಣಿಸಿದ!” – ಉಲ್ಲಾಸ್ ಗೌಡ ಸ್ನೇಹಿತ ಘಟನೆ ಬಗ್ಗೆ ಹೇಳಿದ್ದೇನು.!?

GridArt 20260627

“ನಗುನಗುತ್ತಲೇ ಫೋಟೋಗೆ ಪೋಸ್ ಕೊಟ್ಟಿದ್ದವನು ಮರುಕ್ಷಣವೇ ಬಾರದ ಲೋಕಕ್ಕೆ ಪಯಣಿಸಿದ!” – ಉಲ್ಲಾಸ್ ಗೌಡ ಸ್ನೇಹಿತ ಘಟನೆ ಬಗ್ಗೆ ಹೇಳಿದ್ದೇನು.!?

Bengaluru youth Ullas Gowda, son of film producer Ba.Ma. Harish, died of a suspected heart attack during a Kodachadri trek. His friend recounts the heartbreaking final moments before the tragedy.

ಪ್ರಕೃತಿಯ ಮಡಿಲಿನಲ್ಲಿ ಸಂತಸದಿಂದ ಕಾಲ ಕಳೆಯಲು ಹೋದ ಜೀವವೊಂದು ಮರಳಿ ಮನೆಗೆ ಬಾರದಂತೆ ಕಣ್ಮರೆಯಾದ ಹೃದಯವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕೊಡಚಾದ್ರಿ ಬೆಟ್ಟದಲ್ಲಿ ನಡೆದಿದೆ. ಬೆಂಗಳೂರಿನ ಯುವಕ, ಖ್ಯಾತ ಸಿನಿಮಾ ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಬಾ.ಮಾ. ಹರೀಶ್ ಅವರ ಪುತ್ರ ಉಲ್ಲಾಸ್ ಗೌಡ (28) ಚಾರಣದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಸ್ನೇಹಿತರೊಂದಿಗೆ ನಗುನಗುತ್ತಾ ಬೆಟ್ಟವೇರಿದ್ದ ಯುವಕ, ಕೆಳಗಿಳಿಯುವಾಗ ಹೆಣವಾಗಿ ಮರಳಿದ್ದು ವಿಧಿಯ ಕ್ರೂರ ಆಟಕ್ಕೆ ಸಾಕ್ಷಿಯಾಗಿದೆ. ಘಟನೆಯ ವೇಳೆ ಜೊತೆಯಲ್ಲಿದ್ದ ಉಲ್ಲಾಸ್ ಅವರ ಸ್ನೇಹಿತ ಹಾಗೂ ಸಂಬಂಧಿ ಸುರೇಶ್, ಕಣ್ಣೀರಿಡುತ್ತಲೇ ಆ ಕರಾಳ ಕ್ಷಣಗಳನ್ನು ‘ಪೋಸ್ಟ್ ಮ್ಯಾನ್ ನ್ಯೂಸ್’ ಜೊತೆ ಹಂಚಿಕೊಂಡಿದ್ದಾರೆ.

ಸ್ನೇಹಿತನ ಕರುಳು ಹಿಂಡುವ ಮಾತುಗಳು:

“ಕಳೆದ ಮೂರು-ನಾಲ್ಕು ತಿಂಗಳುಗಳಿಂದ ಎಲ್ಲಾದರೂ ಹೊರಗಡೆ ಸುತ್ತಾಡಿಕೊಂಡು ಬರೋಣ ಎಂದು ಉಲ್ಲಾಸ್ ಹೇಳುತ್ತಿದ್ದ. ಆತನಿಗೆ ನಿದ್ದೆ ಬಿಟ್ಟು ಕಾರು ಓಡಿಸುವುದು ಇಷ್ಟವಿರಲಿಲ್ಲ. ಹೀಗಾಗಿ ಬೆಂಗಳೂರಿನ ಟ್ರಾವೆಲ್ಸ್ ಒಂದರ ಮೂಲಕ ಕೊಡಚಾದ್ರಿ ಟ್ರೆಕ್ಕಿಂಗ್ ಬುಕ್ ಮಾಡಿದ್ದೆವು. ಬೆಳಗ್ಗೆಯಿಂದ ಬಹಳ ಲವಲವಿಕೆಯಿಂದಲೇ ಇದ್ದ ಆತ, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಸರ್ವಜ್ಞ ಪೀಠದವರೆಗೂ ಖುಷಿಯಿಂದಲೇ ಚಾರಣ ಮಾಡಿದ್ದ.”

ಕ್ಯಾಮೆರಾದಲ್ಲಿ ಸೆರೆಯಾದ ಆ ಕಡೆಯ ನಗು!

“ಬೆಟ್ಟದಿಂದ ಕೆಳಗೆ ಇಳಿಯುವಾಗ ತನ್ನ ಮೊಬೈಲ್ ಕೊಟ್ಟು ಫೋಟೋ ತೆಗೆಯುವಂತೆ ಕೇಳಿದ. ನಾನು ಆತನ ನಗುಮುಖದ ಫೋಟೋಗಳನ್ನು ಕ್ಲಿಕ್ಕಿಸಿದೆ. ಆದರೆ, ಆ ನಗು ಕೇವಲ ಒಂದೆರಡು ನಿಮಿಷಗಳಿಗಷ್ಟೇ ಸೀಮಿತವಾಗಿತ್ತು. ಫೋಟೋ ತೆಗೆಸಿಕೊಂಡ ಮರುಕ್ಷಣವೇ ಎದೆ ಹಿಡಿದುಕೊಂಡು ಕುಸಿದು ಬಿದ್ದ! ನನಗೇನು ಮಾಡಬೇಕೆಂದೇ ತೋಚಲಿಲ್ಲ, ಗಾಬರಿಯಿಂದ ಬಾಯಿಗೆ ಬಾಯಿ ಕೊಟ್ಟು ಉಸಿರಾಟ (ಪಂಪ್) ನೀಡಲು ಯತ್ನಿಸಿದೆ, ಆದರೆ ಆತ ಸುಧಾರಿಸಿಕೊಳ್ಳಲಿಲ್ಲ” ಎಂದು ಹೇಳುತ್ತಾ ಸುರೇಶ್ ಬಿಕ್ಕಿ ಬಿಕ್ಕಿ ಅತ್ತರು.

ಉಸಿರು ಉಳಿಸಿಕೊಳ್ಳಲು ನಡೆದ ಆ ಹೋರಾಟ:

“ಕೂಡಲೇ ‘ವೈದ್ಯರು ಯಾರಾದರೂ ಇದ್ದೀರಾ?’ ಎಂದು ನಾನು ಕಿರುಚಿಕೊಂಡೆ. ಅಲ್ಲೇ ಬೇರೆ ಜೀಪಿನಲ್ಲಿ ಬಂದಿದ್ದ ಮಹಿಳಾ ವೈದ್ಯರೊಬ್ಬರು ಓಡಿಬಂದು ಸಿಪಿಆರ್ (CPR) ಮಾಡಿದರು. ‘ಪಲ್ಸ್ ಇದೆ, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ’ ಎಂದು ಅವರು ಹೇಳಿದರು. ತಕ್ಷಣವೇ ಸ್ಥಳೀಯರ ನೆರವಿನಿಂದ ಹತ್ತಿರದ ನಗರದ ಸರ್ಕಾರಿ ಆಸ್ಪತ್ರೆಗೆ ಕರೆತಂದೆವು. ಅಲ್ಲಿನ ವೈದ್ಯರು ಆಂಬುಲೆನ್ಸ್‌ನಲ್ಲೇ ಇಂಜೆಕ್ಷನ್ ನೀಡಿ, ‘ಇನ್ನೂ ಪಲ್ಸ್ ಇದೆ, ಆದಷ್ಟು ಬೇಗ ಹೊಸನಗರ ಆಸ್ಪತ್ರೆಗೆ ಕರೆದೊಯ್ಯಿರಿ’ ಎಂದರು. ಆದರೆ, ಅಲ್ಲಿಗೆ ತಲುಪುವಷ್ಟರಲ್ಲೇ ನಮ್ಮನೆಲ್ಲಾ ಬಿಟ್ಟು ಹೋಗಿದ್ದ,” ಎಂದು ಸುರೇಶ್ ಘಟನೆಯನ್ನು ವಿವರಿಸಿದ್ದಾರೆ.

ಶೋಕಸಾಗರದಲ್ಲಿ ಮುಳುಗಿದ ಕುಟುಂಬ:

ಉಲ್ಲಾಸ್ ಅವರು ಸುರೇಶ್ ಹಾಗೂ ಇತರ 11 ಮಂದಿ ಸದಸ್ಯರೊಂದಿಗೆ ಬೆಂಗಳೂರಿನಿಂದ ಟಿಟಿ ವಾಹನದಲ್ಲಿ ಕೊಡಚಾದ್ರಿಗೆ ಆಗಮಿಸಿದ್ದರು. ಸದ್ಯ ಮೃತದೇಹವನ್ನು ಹೊಸನಗರ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ.

ಕಣ್ಮಣಿಯಂತಹ ಮಗನನ್ನು ಕಳೆದುಕೊಂಡ ಬಾ.ಮಾ. ಹರೀಶ್ ಅವರ ಕುಟುಂಬ ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ. ಟ್ರೆಕ್ಕಿಂಗ್‌ಗೆಂದು ನಗುನಗುತ್ತಾ ಹೋದ ಯುವಕ ಶವವಾಗಿ ಮರಳುತ್ತಿರುವುದು ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.