ಇನ್ಸ್ಟಾಗ್ರಾಮ್ ‘ಜ್ಯೋತಿಷ್ಯ’ಕ್ಕೆ ಮರುಳಾದ ಯುವತಿ: ತಾಯಿಗೆ ಮಾಟ-ಮಂತ್ರದ ಭೀತಿ ಹುಟ್ಟಿಸಿ 1.84 ಲಕ್ಷ ರೂ. ಪೀಕಿದ ಖದೀಮರು!
Shivamogga lost ₹1.84 lakh to cyber fraudsters after an Instagram astrologer claimed her ailing mother was a victim of black magic. Read how the online scam unfolded.
ಶಿವಮೊಗ್ಗ: ಸೈಬರ್ ವಂಚಕರು ದಿನಕ್ಕೊಂದು ಹೊಸ ಮಾರ್ಗಗಳ ಮೂಲಕ ಮುಗ್ಧ ಜನರನ್ನು ಬಲೆಗೆ ಬೀಳಿಸುತ್ತಿದ್ದಾರೆ. ಇದೀಗ ಆನ್ಲೈನ್ ಜ್ಯೋತಿಷ್ಯದ ಹೆಸರಿನಲ್ಲಿ ಹೆಣೆದಿದ್ದ ಖೆಡ್ಡಾಕ್ಕೆ ಬಿದ್ದ ಶಿವಮೊಗ್ಗದ ಯುವತಿಯೊಬ್ಬರು ಬರೋಬ್ಬರಿ 1.84 ಲಕ್ಷ ರೂ. ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ತನ್ನ ತಾಯಿಯ ಅನಾರೋಗ್ಯದಿಂದ ಕಂಗೆಟ್ಟಿದ್ದ ಯುವತಿ, ಪರಿಹಾರಕ್ಕಾಗಿ ಹುಡುಕಾಡುತ್ತಿದ್ದಾಗ ಸೈಬರ್ ವಂಚಕರ ಬಲೆಗೆ ಬಿದ್ದಿದ್ದಾಳೆ. ಮೋಸ ಹೋದ ಬಗ್ಗೆ ಸಂತ್ರಸ್ತೆ ಶಿವಮೊಗ್ಗ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ವಂಚನೆ ನಡೆದಿದ್ದು ಹೇಗೆ?
ಇನ್ಸ್ಟಾಗ್ರಾಮ್ ಬಳಸುತ್ತಿದ್ದಾಗ ಯುವತಿಯ ಕಣ್ಣಿಗೆ ‘ಸಿಗಂದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯಾಲಯ’ ಎಂಬ ಆಕರ್ಷಕ ಜಾಹೀರಾತೊಂದು ಬಿದ್ದಿದೆ. ತಾಯಿಯ ಅನಾರೋಗ್ಯಕ್ಕೆ ಇಲ್ಲಿ ಪರಿಹಾರ ಸಿಗಬಹುದು ಎಂಬ ಕುರುಡು ನಂಬಿಕೆಯಿಂದ ಅದರಲ್ಲಿ ನೀಡಲಾಗಿದ್ದ ಫೋನ್ ನಂಬರ್ಗೆ ಯುವತಿ ಕರೆ ಮಾಡಿದ್ದಾಳೆ.
ಕರೆ ಸ್ವೀಕರಿಸಿದ ವಂಚಕ, ತಾನು ಜ್ಯೋತಿಷಿ ಎಂದು ನಂಬಿಸಿ ಸಮಸ್ಯೆಗೆ ಪೂಜೆ ಮಾಡಬೇಕಾಗುತ್ತದೆ ಎಂದಿದ್ದಾನೆ. ಅಲ್ಲದೆ, ಆರಂಭಿಕ ಕಾಣಿಕೆಯಾಗಿ 501 ರೂ.ಗಳನ್ನು ಆನ್ಲೈನ್ ಮೂಲಕ ಕಳುಹಿಸಲು ಸೂಚಿಸಿದ್ದಾನೆ. ಯುವತಿ ಕೂಡಲೇ ಗೂಗಲ್ ಪೇ (Google Pay) ಮೂಲಕ ಹಣ ವರ್ಗಾಯಿಸಿದ್ದಾಳೆ.
ಭಯ ಹುಟ್ಟಿಸಿ ಅಸಲಿ ಆಟ ಶುರು ಮಾಡಿದ ವಂಚಕರು:
501 ರೂ. ಖಾತೆಗೆ ಜಮಾವಾಗುತ್ತಿದ್ದಂತೆ ಕೇವಲ ಅರ್ಧ ಗಂಟೆಯಲ್ಲಿ ಯುವತಿಗೆ ಮರಳಿ ಕರೆ ಮಾಡಿದ ಖದೀಮ, “ನಿಮ್ಮ ತಾಯಿಗೆ ಯಾರೋ ಮಾಟ-ಮಂತ್ರ ಮಾಡಿಸಿದ್ದಾರೆ. ತಕ್ಷಣವೇ ದೊಡ್ಡ ಮಟ್ಟದ ಪೂಜೆ ಮಾಡಿಸದಿದ್ದರೆ ಅವರ ಪ್ರಾಣಕ್ಕೆ ಕುತ್ತು ಬರುವುದು ಖಚಿತ” ಎಂದು ಬೆದರಿಸಿದ್ದಾನೆ. ತಾಯಿಯ ಜೀವ ಉಳಿಸುವ ಆತುರದಲ್ಲಿ ಯುವತಿ, ಪೂಜೆಯ ವೆಚ್ಚಕ್ಕಾಗಿ ಅವರು ಕೇಳಿದ 25,000 ರೂ.ಗಳನ್ನು ಫೋನ್ ಪೇ (PhonePe) ಮೂಲಕ ಕಳುಹಿಸಿದ್ದಾಳೆ.
’ಮುಖ್ಯ ಗುರೂಜಿ’ಯ ಎಂಟ್ರಿ ಮತ್ತು ನಕಲಿ ಫೋಟೋಗಳ ತಂತ್ರ:
ಅಷ್ಟಕ್ಕೆ ಸುಮ್ಮನಾಗದ ವಂಚಕರು, ಮತ್ತೊಂದು ಫೋನ್ ನಂಬರ್ ನೀಡಿ “ಇವರು ನಮ್ಮ ಮುಖ್ಯ ಗುರೂಜಿ” ಎಂದು ಪರಿಚಯಿಸಿದ್ದಾರೆ. ಆ ನಕಲಿ ಗುರೂಜಿ ಯುವತಿಯ ಬಳಿ ಅವಳ ಮತ್ತು ತಾಯಿಯ ಹಸ್ತ ಹಾಗೂ ಮುಖದ ಫೋಟೋಗಳನ್ನು ವಾಟ್ಸಾಪ್ ಮೂಲಕ ತರಿಸಿಕೊಂಡಿದ್ದಾನೆ. ಪೂಜೆ ಮಾಡುತ್ತಿರುವಂತೆ ಎಡಿಟ್ ಮಾಡಿದ ನಕಲಿ ಫೋಟೋಗಳನ್ನು ಕಳುಹಿಸಿ ಯುವತಿಯ ನಂಬಿಕೆ ಗಳಿಸಿದ್ದಾನೆ.
ಹಂತ ಹಂತವಾಗಿ 1.84 ಲಕ್ಷ ಸುಲಿಗೆ:
“ಪರಿಸ್ಥಿತಿ ಕೈ ಮೀರುತ್ತಿದೆ, ತಾಯಿಯ ಜೀವಕ್ಕೆ ಅಪಾಯವಿದೆ” ಎಂದು ಪದೇ ಪದೇ ಭಯಭೀತಳನ್ನಾಗಿ ಮಾಡಿ, ಹಂತ ಹಂತವಾಗಿ ವಿವಿಧ ಮೊಬೈಲ್ ನಂಬರ್ಗಳಿಗೆ ಒಟ್ಟು 1,84,302 ರೂ.ಗಳನ್ನು ವರ್ಗಾಯಿಸಿಕೊಳ್ಳುವಲ್ಲಿ ವಂಚಕರು ಯಶಸ್ವಿಯಾಗಿದ್ದಾರೆ.
ಕೊನೆಗೆ ಎಷ್ಟೇ ಹಣ ನೀಡಿದರೂ ಪೂಜೆ ಮುಗಿಯದಿದ್ದಾಗ ಮತ್ತು ಅವರ ಮಾತುಗಳಲ್ಲಿ ವ್ಯತ್ಯಾಸ ಕಂಡುಬಂದಾಗ ತಾನು ಮೋಸ ಹೋಗಿರುವುದು ಯುವತಿಯ ಅರಿವಿಗೆ ಬಂದಿದೆ. ಕೂಡಲೇ ಎಚ್ಚೆತ್ತ ಆಕೆ, ವಂಚಕರನ್ನು ಪತ್ತೆ ಹಚ್ಚಿ ತನ್ನ ಹಣವನ್ನು ಮರಳಿ ಕೊಡಿಸುವಂತೆ ಕೋರಿ ಶಿವಮೊಗ್ಗದ ಸಿಇಎನ್ (CEN – Cyber, Economic and Narcotics) ಅಪರಾಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.