Headlines

ಮಹಿಳೆಗೆ ಚಾಕು ತೋರಿಸಿ ಮಾಂಗಲ್ಯಸರ ಕಿತ್ತ ಆರೋಪಿಯ ಸೆರೆ – ಲಕ್ಷಾಂತರ ಮೌಲ್ಯದ ಮಾಲು ವಶ

police arrested Pratap B, the accused who threatened a woman at knife-point and snatched her mangalsutra in Jedikatte, Shivamogga. Stolen gold ornaments worth ₹1.50 lakh and the bike used in the crime were recovered.

ಶಿವಮೊಗ್ಗ: ಭದ್ರಾವತಿ ತಾಲೂಕಿನ ಜೇಡಿಕಟ್ಟೆ ಪ್ರದೇಶದಲ್ಲಿ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಬೆದರಿಸಿ ಮಾಂಗಲ್ಯಸರ ಕಿತ್ತುಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿ, ಕಳ್ಳತನವಾದ ಲಕ್ಷಾಂತರ ರೂಪಾಯಿ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.


ಜನವರಿ 5ರ ಬೆಳಗ್ಗೆ 23 ವರ್ಷದ ಭಾಗ್ಯ ಅವರು ಮನೆಯ ಬಾಗಿಲನ್ನು ತೊಳೆಯಲು ಡ್ರಮ್‌ನಿಂದ ನೀರು ತೆಗೆದುಕೊಳ್ಳಲು ಹೊರಗಡೆ ಹೋದಾಗ, ಯುವಕನೊಬ್ಬ ಅಚಾನಕ್ ಆಗಿ ಎದುರಾಗಿದ್ದನು. ಕೈಯಲ್ಲಿ ಚಾಕುವನ್ನು ಹಿಡಿದುಕೊಂಡು “ನಿನ್ನ ತಾಳಿಸರ ಕೊಡು, ಇಲ್ಲದಿದ್ದರೆ ಚಾಕು ಹಾಕಿ ಸಾಯಿಸುತ್ತೇನೆ” ಎಂದು ಬೆದರಿಸಿ, ಅವರಿಂದ ಬಲವಂತವಾಗಿ ಮಾಂಗಲ್ಯಸರವನ್ನು ಬಿಚ್ಚಿಸಿಕೊಂಡು ಪರಾರಿಯಾಗಿದ್ದನು.

ಈ ಬಗ್ಗೆ ಸಂತ್ರಸ್ತೆ ಭಾಗ್ಯ ಅವರು ಭದ್ರಾವತಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು. ತನಿಖಾ ತಂಡವು ತ್ವರಿತ ಕಾರ್ಯಾಚರಣೆ ನಡೆಸಿ, ಜನವರಿ 6ರಂದು ಆರೋಪಿಯಾದ ಹರಿಹರ ತಾಲೂಕು ಹೊಸಪಾಳ್ಯದ ವಾಸಿ, ಕೂಲಿ ಕಾರ್ಮಿಕ ಪ್ರತಾಪ್ ಬಿ, ಬಿನ್ ಬಸಪ್ಪ (25) ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಒಂದು ಸಣ್ಣ ಚಾಕು, ಕಳ್ಳತನಕ್ಕೆ ಉಪಯೋಗಿಸಿದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್, ಮತ್ತು ಮಹಿಳೆಯಿಂದ ಕಿತ್ತುಕೊಂಡಿದ್ದ ಬಂಗಾರದ ಎರಡು ತಾಳಿ, ಒಂದು ಲಕ್ಷ್ಮಿ ತಾಳಿ ಹಾಗೂ ನಾಲ್ಕು ಬಂಗಾರದ ಗುಂಡುಗಳಿರುವ ಕರಿಮಣಿ ಮಾಂಗಲ್ಯಸರ ಸೇರಿ ಒಟ್ಟು ಅಂದಾಜು ₹1.50 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.


ಪೊಲೀಸರ ಸಮಯೋಚಿತ ಕ್ರಮದಿಂದ ಸಂತ್ರಸ್ತೆಗೆ ನ್ಯಾಯ ದೊರಕಿದ್ದು, ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಾಗಿದೆ. ಪ್ರಕರಣದ ಬಗ್ಗೆ ಮುಂದಿನ ತನಿಖೆ ನಡೆಯುತ್ತಿದೆ.