ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಅಕ್ಕ ಪಡೆಗೆ ಚಾಲನೆ ನೀಡಲಾಗಿದೆ. 112, 1098 ಸಹಾಯವಾಣಿ ಜಾಗೃತಿ, ಶಾಲಾ–ಕಾಲೇಜುಗಳ ಬಳಿ ಗಸ್ತು ಕಾರ್ಯಾಚರಣೆ ಮುಖ್ಯ ಗುರಿ.
SHIVAMOGGA | ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ “ಅಕ್ಕ ಪಡೆ”ಗೆ ಅಧಿಕೃತ ಚಾಲನೆ
ಶಿವಮೊಗ್ಗ : ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ವಿಶೇಷವಾಗಿ “ಅಕ್ಕ ಪಡೆ”ಯನ್ನು ರಚಿಸಲಾಗಿದ್ದು, ಸಮಾಜಘಾತುಕ ಶಕ್ತಿಗಳಿಂದ ನಡೆಯುವ ಯಾವುದೇ ರೀತಿಯ ಕಿರುಕುಳ, ದೌರ್ಜನ್ಯ ಹಾಗೂ ಅಸಭ್ಯ ವರ್ತನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕಿಲ್ ಬಿ. ತಿಳಿಸಿದರು.
ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನೂತನವಾಗಿ ರಚಿಸಲಾದ ಅಕ್ಕ ಪಡೆಗೆ ಬುಧವಾರ ಅಧಿಕೃತ ಚಾಲನೆ ನೀಡಿ ಅವರು ಮಾತನಾಡಿ ಅಪಾಯದಲ್ಲಿರುವ ಮತ್ತು ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಹಾಗೂ ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು ಅಕ್ಕ ಪಡೆಯ ಪ್ರಾಥಮಿಕ ಗುರಿಯಾಗಿದೆ. ಇಡೀ ರಾಜ್ಯದಲ್ಲಿ ಬೇರೆ ಬೇರೆ ಹೆಸರಿನಲ್ಲಿ ಇಂತಹ ಪಡೆಗಳು ಕಾರ್ಯನಿರ್ವಹಿಸುತ್ತಿದ್ದರೂ, ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷ ಮಾದರಿಯಲ್ಲಿ ಈ ತಂಡ ಕೆಲಸ ಮಾಡಲಿದೆ ಎಂದು ಹೇಳಿದರು.
ಶಾಲಾ–ಕಾಲೇಜು ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ರಕ್ಷಣೆಗೆ ಹಾಗೂ ಅವರಿಗೆ ಮಾನಸಿಕ ಧೈರ್ಯ ತುಂಬಲು ಅಕ್ಕ ಪಡೆ ನಿರಂತರವಾಗಿ ಕಾರ್ಯನಿರ್ವಹಿಸಲಿದೆ. ಪ್ರತಿ ದಿನ ಎರಡು ಪಾಳಿಗಳಲ್ಲಿ ಈ ಪಡೆ ಕೆಲಸ ಮಾಡಲಿದ್ದು, ಜನನಿಬಿಡ ಪ್ರದೇಶಗಳು, ಸೂಕ್ಷ್ಮ ವಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಹೆಚ್ಚಿನ ನಿಗಾ ವಹಿಸಲಿದೆ.
ಈ ತಂಡದ ಕಾರ್ಯಾಚರಣೆಗೆ ಹೊಸ ವಾಹನವನ್ನು ನೀಡಲಾಗಿದ್ದು, ಅಕ್ಕ ಪಡೆ ಸದಸ್ಯರೊಂದಿಗೆ ಶಾಲಾ–ಕಾಲೇಜುಗಳು, ಮಾರುಕಟ್ಟೆ ಪ್ರದೇಶಗಳು ಮತ್ತು ಜನಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ ಗಸ್ತು ತಿರುಗಲಿದೆ. ಜೊತೆಗೆ ಸಹಾಯವಾಣಿ ಸಂಖ್ಯೆಗಳಾದ 112 ಮತ್ತು 1098 ಕುರಿತು ಹಾಗೂ ಮಹಿಳಾ–ಮಕ್ಕಳ ಸಂಬಂಧಿತ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಲಿದೆ.
ಮಹಿಳಾ ಗೃಹರಕ್ಷಕಿಯರು ಹಾಗೂ ಮಹಿಳಾ ಅಧಿಕಾರಿಗಳನ್ನೇ ಈ ಪಡೆಗೆ ನೇಮಿಸಲಾಗಿದ್ದು, ಜಿಲ್ಲೆಯ ಮಹಿಳೆಯರು ಮತ್ತು ಹೆಣ್ಣುಮಕ್ಕಳು ನಿರ್ಭೀತಿಯಿಂದ ಅಕ್ಕ ಪಡೆಯ ನೆರವನ್ನು ಪಡೆದುಕೊಳ್ಳಬೇಕು ಹಾಗೂ ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಎಸ್‌ಪಿ ಕರೆ ನೀಡಿದರು.