Headlines

ಬಿಸಿಎಂ ಮಹಿಳಾ ವಸತಿ ನಿಲಯಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ದಿಡೀರ್ ಭೇಟಿ | ವಾರ್ಡನ್‌ ವಿರುದ್ಧ ಗರಂ

ಬಿಸಿಎಂ ಮಹಿಳಾ ವಸತಿ ನಿಲಯಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ದಿಡೀರ್ ಭೇಟಿ | ವಾರ್ಡನ್‌ ವಿರುದ್ಧ ಗರಂ

ರಿಪ್ಪನ್‌ಪೇಟೆ : ಸಾಗರ–ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಶನಿವಾರ ಸಂಜೆ ರಿಪ್ಪನ್‌ಪೇಟೆಯ ಬಿಸಿಎಂ ಮಹಿಳಾ ವಸತಿ ನಿಲಯಕ್ಕೆ ದಿಡೀರ್ ಭೇಟಿ ನೀಡಿ, ಹಾಸ್ಟೆಲ್‌ನ ವ್ಯವಸ್ಥೆಯನ್ನು ಪರಿಶೀಲಿಸಿದರು. ಆಹಾರ ಗುಣಮಟ್ಟ ಮತ್ತು ಹಾಜರಾತಿ ದಾಖಲೆ ಕುರಿತು ಬಂದಿದ್ದ ದೂರುಗಳ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಯಿತು.

ಶಾಸಕರ ಭೇಟಿ ಸಂದರ್ಭದಲ್ಲಿ ಹಾಸ್ಟೆಲ್ ವಾರ್ಡನ್ ಹಾಜರಾತಿ ಸರಿಯಾಗಿ ದಾಖಲು ಮಾಡದಿರುವುದ ಬಗ್ಗೆ ಗರಂ ಆಗಿ, ವಾರ್ಡನ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ತೀವ್ರ ಸೂಚನೆ ನೀಡಿದರು. ಹಾಳಾಗಿರುವ ಥಂಬ್ ಹಾಜರಾತಿ ಯಂತ್ರವನ್ನು ಆರು ತಿಂಗಳಾದರೂ ಸರಿಪಡಿಸದಿರುವುದು ಮತ್ತು ಹಾಜರಾತಿ ಪುಸ್ತಕದಲ್ಲಿ ತಪ್ಪು ಮಾಹಿತಿ ದಾಖಲಿಸಿರುವುದು ಶಾಸಕರ ಆಕ್ರೋಶಕ್ಕೆ ಕಾರಣವಾಯಿತು.

ಅದೇ ವೇಳೆ ಮಕ್ಕಳಿಗೆ ಆಹಾರ ಸರಿಯಾಗಿ ಸಿಗುತ್ತಿಲ್ಲ ಎಂಬ ಮಾಹಿತಿಯನ್ನೂ ಶಾಸಕರು ಗಂಭೀರವಾಗಿ ಪರಿಗಣಿಸಿ ಅಡುಗೆ ಸಿಬ್ಬಂದಿಗೆ ಕಡ್ಡಾಯ ಎಚ್ಚರಿಕೆ ನೀಡಿದರು.

ನಂತರ ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂಭಾಷಣೆ ನಡೆಸಿದ ಶಾಸಕರು, ಅವರ ದಿನನಿತ್ಯದ ಬದುಕು, ಆಹಾರ ವ್ಯವಸ್ಥೆ, ಶಿಕ್ಷಣದ ಸೌಲಭ್ಯಗಳು ಮತ್ತು ಮೂಲಭೂತ ಸಮಸ್ಯೆಗಳ ಕುರಿತು ವಿಚಾರಿಸಿದರು. ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡರು.

“ನಿಮ್ಮ ಶಿಕ್ಷಣ, ನಿಮ್ಮ ಭವಿಷ್ಯ ನಮ್ಮ ಆದ್ಯತೆ. ನಿಮ್ಮ ಕನಸುಗಳನ್ನು ನನಸು ಮಾಡಲು ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ತಲುಪಿಸುವುದು ನಮ್ಮ ಕರ್ತವ್ಯ,” ಎಂದು ಶಾಸಕರು ಮಕ್ಕಳಿಗೆ ಧೈರ್ಯ ತುಂಬಿ, ಉತ್ತಮವಾಗಿ ಓದಿ ಉತ್ತಮ ಅಂಕಗಳನ್ನು ಪಡೆಯುವಂತೆ ಪ್ರೇರಣೆ ನೀಡಿದರು.