Headlines

RIPPONPETE | ನಿರ್ಲಕ್ಷ್ಯದಿಂದ ಜಾನುವಾರು ಸಾಗಣೆ – ಚಾಲಕನ ಅಜಾಗರೂಕತೆಗೆ ಹಸು ಬಲಿ

ನಿರ್ಲಕ್ಷ್ಯದಿಂದ ಜಾನುವಾರು ಸಾಗಣೆ – ಚಾಲಕನ ಅಜಾಗರೂಕತೆಗೆ ಹಸು ಬಲಿ

ರಿಪ್ಪನ್ ಪೇಟೆ : ಜಾನುವಾರು ಸಾಗಣೆ ಪ್ರಕರಣದಲ್ಲಿ ನಿರ್ಲಕ್ಷ್ಯ ಚಾಲನೆಯಿಂದ ಹಸುವೊಂದು ಮೃತಪಟ್ಟ ಘಟನೆ ಅರಸಾಳು ವ್ಯಾಪ್ತಿಯಲ್ಲಿ ಇಂದು ನಡೆದಿದೆ.

ರಿಪ್ಪನ್‌ಪೇಟೆ ದಿಕ್ಕಿನಿಂದ ಅರಸಾಳು ಕಡೆಗೆ ಸಂಚರಿಸುತ್ತಿದ್ದ ಟಾಟಾ ಏಸ್ (KA 40 B 1570) ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ  ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ವಾಹನ ಚಾಲಕ ಹಾಗೂ ಸಹಚರರನ್ನು ಪೊಲೀಸರು ವಶಕ್ಕೆ ಪಡೆದರು.

ಆರೋಪಿತರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಸಿದ್ದಗಟ್ಟಿ ಗ್ರಾಮದ ಅನಿಲ್ ಬಿ ಎಮ್ (27) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮದ ಸುರೇಶ್ (25) ಎಂದು ಗುರುತಿಸಲಾಗಿದೆ.

ವಾಹನದ ಹಿಂಭಾಗವನ್ನು ಕಬ್ಬಿಣದ ಕಮಾನು, ಶೀಟ್ ಹಾಗೂ ಹಸಿರು ತಾರ್ಪೈಲಿನಿಂದ ಸಂಪೂರ್ಣ ಮುಚ್ಚಲಾಗಿದ್ದು, ಒಳಗೆ ಮೂರು ಕಪ್ಪು ಬಣ್ಣದ ಹಸುಗಳು ಹಾಗೂ ಒಂದು ಕಂದು ಹೋರಿ ಗಾಳಿ, ಬೆಳಕು, ನೀರು, ಆಹಾರದ ಯಾವುದೇ ವ್ಯವಸ್ಥೆಯಿಲ್ಲದೆ ಕಟ್ಟಿ ಹಾಕಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಜಾನುವಾರುಗಳನ್ನು ಹಿಂಸೆಯಾಗುವ ರೀತಿಯಲ್ಲಿ ಸಾಗಿಸಲಾಗುತ್ತಿತ್ತು , ಈ ವೇಳೆ ನಿರ್ಲಕ್ಷ್ಯ ಚಾಲನೆಯ ಪರಿಣಾಮವಾಗಿ ವಾಹನದಿಂದ ಒಂದು ಕಪ್ಪು ಬಣ್ಣದ ಹಸು ಜಿಗಿದು ರಸ್ತೆ ಮೇಲೆ ಬಿದ್ದು, ವಾಹನದೊಂದಿಗೆ ಎಳೆದಾಡಲ್ಪಟ್ಟ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದೆ.ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಕಾನೂನುಬದ್ಧ ಪರವಾನಗಿ ಕೇಳಿದಾಗ ಆರೋಪಿತರು “ಪರವಾನಗಿ ಇಲ್ಲ”ವೆಂದು ಒಪ್ಪಿಕೊಂಡಿದ್ದಾರೆ.

ಮೃತಪಟ್ಟ ಹಸುವಿನ ಮರಣೋತ್ತರ ಪರೀಕ್ಷೆಗಾಗಿ ಕ್ರಮ ಕೈಗೊಂಡಿದ್ದು, ಇಬ್ಬರು ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಜಾನುವಾರು ಹಿಂಸೆ ನಿಯಂತ್ರಣ ಕಾಯ್ದೆ, ಮೋಟಾರ್ ವಾಹನ ಕಾಯ್ದೆ, ಹಾಗೂ ನಿರ್ಲಕ್ಷ್ಯ ಚಾಲನೆಗೆ ಸಂಬಂಧಿಸಿದ ವಿಧಿಗಳು ಸೇರಿದಂತೆ ಅನೇಕ ಕಾನೂನುಗಳನ್ನು ಉಲ್ಲಂಘಿಸಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.