ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ: ಮಾತಿನ ಚಕಮಕಿಯಲ್ಲಿ ಚಾಕು ಇರಿತ, ಓರ್ವ ಸಾವು
Vinod, who was seriously injured in the stabbing, died on the spot. Police said that the accused Vikram fled the scene after the incident.

ಶಿವಮೊಗ್ಗ: ಸ್ನೇಹಿತರಿಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಶಿವಮೊಗ್ಗ ನಗರದ ಹೊರವಲಯದ ಮಲವಗೊಪ್ಪದ ಪೆಟ್ರೋಲ್ ಬಂಕ್ ಸಮೀಪ ಶನಿವಾರ ರಾತ್ರಿ ಸಂಭವಿಸಿದೆ.
ವಿನೋದ್ ಹಾಗೂ ವಿಕ್ರಮ್ ಎಂಬವರು ಪರಸ್ಪರ ಸ್ನೇಹಿತರಾಗಿದ್ದು, ಮಲವಗೊಪ್ಪದ ಬಳಿ ಮದ್ಯ ಸೇವನೆ ಮಾಡುತ್ತಿದ್ದ ವೇಳೆ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದು ಜಗಳಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ವಿಕ್ರಮ್ ತನ್ನ ಬಳಿ ಇದ್ದ ಚಾಕುವಿನಿಂದ ವಿನೋದ್ ಮೇಲೆ ಮನಬಂದಂತೆ ಇರಿದು ದಾಳಿ ನಡೆಸಿದ್ದಾನೆ.
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ವಿನೋದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಆರೋಪಿ ವಿಕ್ರಮ್ ಸ್ಥಳದಿಂದ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.