Headlines

ತುಂಗಾ ನದಿದಡದಲ್ಲಿ ಬೆಳಕಿನ ವೈಭವ: ಎಳ್ಳಮಾವಾಸ್ಯೆ ಜಾತ್ರೆಯ ತೆಪ್ಪೋತ್ಸವಕ್ಕೆ ಅದ್ದೂರಿ ತೆರೆ

ತುಂಗಾ ನದಿದಡದಲ್ಲಿ ಬೆಳಕಿನ ವೈಭವ: ಎಳ್ಳಮಾವಾಸ್ಯೆ ಜಾತ್ರೆಯ ತೆಪ್ಪೋತ್ಸವಕ್ಕೆ ಅದ್ದೂರಿ ತೆರೆ

Thirthahalli: Amidst the cold breeze, the chilling cold, and the dazzling lights in the Banangala, the last day of the Ellamavasya Fair, held on the banks of the Tunga River, was celebrated with devotion and enthusiasm.

ತೀರ್ಥಹಳ್ಳಿ: ತಣ್ಣನೆಯ ತಂಗಾಳಿ, ಮನ ಕಲುಕುವ ಚಳಿ ಹಾಗೂ ಬಾನಂಗಳದಲ್ಲಿ ಮೂಡಿದ ಬೆಳಕಿನ ಚಿತ್ತಾರಗಳ ನಡುವೆ ತುಂಗಾ ನದಿಯ ದಡದಲ್ಲಿ ನಡೆದ ಎಳ್ಳಮಾವಾಸ್ಯೆ ಜಾತ್ರೆಯ ಕೊನೆಯ ದಿನದ ತೆಪ್ಪೋತ್ಸವ ಕಾರ್ಯಕ್ರಮ ಭಕ್ತಿಭಾವ ಮತ್ತು ಸಂಭ್ರಮದಿಂದ ನೆರವೇರಿತು.

ತುಂಗೆಯ ಒಡಲೊಳಗೆ ಓಕುಳಿ ಸುರಿದಂತಿದ್ದ ಬೆಳಕಿನ ವೈಭವ, ಸಿಡಿಮದ್ದುಗಳ ಘರ್ಜನೆಯೊಂದಿಗೆ ಹಬ್ಬದ ಸಡಗರವನ್ನು ಇನ್ನಷ್ಟು ಹೆಚ್ಚಿಸಿತು.

ಪ್ರತಿ ವರ್ಷದಂತೆ ಈ ಬಾರಿ ಕೂಡ ತುಂಗಾ ನದಿಯ ದಡದಲ್ಲಿ ಆಯೋಜಿಸಲಾದ ತೆಪ್ಪೋತ್ಸವ ಕಾರ್ಯಕ್ರಮ ಮಲೆನಾಡಿನ ಜನರಿಂದ ಭಾರೀ ಸ್ಪಂದನೆ ಪಡೆಯಿತು. ಸಹಸ್ರಾರು ಭಕ್ತರು ಹಾಗೂ ಪ್ರವಾಸಿಗರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು, ನದಿಯ ಮಧ್ಯೆ ಸಾಗಿದ ಅಲಂಕೃತ ತೆಪ್ಪಗಳು ಕಣ್ಮನ ಸೆಳೆಯುವ ದೃಶ್ಯವನ್ನು ಮೂಡಿಸಿವೆ. ಬೆಳಕಿನ ಅಲಂಕಾರ, ಸಂಗೀತ ಮತ್ತು ಭಕ್ತಿಗೀತೆಗಳ ನಡುವೆ ನಡೆದ ತೆಪ್ಪೋತ್ಸವವು ಭಕ್ತರಲ್ಲಿ ಆನಂದ ಹಾಗೂ ಆಧ್ಯಾತ್ಮಿಕ ಉತ್ಸಾಹವನ್ನು ಹೆಚ್ಚಿಸಿತು.

ಜಾತ್ರೆಯ ಕೊನೆಯ ದಿನದಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜನಮನ ಸೆಳೆದವು. ಹೆಸರಾಂತ ಗಾಯಕ ರಾಮಚಂದ್ರ ಹಡಪದ, ಮೇಘನಾ ಕುಂದಾಪುರ ಹಾಗೂ ಶ್ವೇತಾ ಪ್ರಭು ಅವರ ಗಾನ ವೈಭವದ ಸಂಗೀತ ರಸಸಂಜೆ ಕಾರ್ಯಕ್ರಮಕ್ಕೆ ಸಾವಿರಾರು ಕಲಾರಸಿಕರು ಮತ್ತು ಭಕ್ತಾಧಿಗಳು ಸಾಕ್ಷಿಯಾದರು. ಜನಪ್ರಿಯ ಭಕ್ತಿಗೀತೆಗಳು ಹಾಗೂ ಮನಮೋಹಕ ಹಾಡುಗಳ ಮೂಲಕ ಕಲಾವಿದರು ಪ್ರೇಕ್ಷಕರ ಮನಗೆದ್ದರು.

ಈ ಸಂಪೂರ್ಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸ್ಥಳೀಯ ಮಲೆನಾಡಿಗರ ಸಹಕಾರ, ಭಕ್ತರ ಪ್ರೋತ್ಸಾಹ ಹಾಗೂ ಜಾತ್ರಾ ಸಮಿತಿಯ ವಿವಿಧ ಪದಾಧಿಕಾರಿಗಳ ಶ್ರಮ ಪ್ರಮುಖ ಪಾತ್ರ ವಹಿಸಿದೆ. ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಹಾಗೂ ಸ್ವಯಂಸೇವಕರ ಸಹಕಾರವೂ ಗಮನಾರ್ಹವಾಗಿತ್ತು.

ಇದರಿಂದಾಗಿ ಈ ವರ್ಷದ ಎಳ್ಳಮಾವಾಸ್ಯೆ ಜಾತ್ರೆಯು ಭಕ್ತಿ, ಸಂಸ್ಕೃತಿ ಮತ್ತು ಸಂಭ್ರಮದ ಸಂಗಮವಾಗಿ ನೆನಪಿನಲ್ಲಿ ಉಳಿಯುವಂತಾಯಿತು.

About The Author