Headlines

ರಿಪ್ಪನ್‌ಪೇಟೆ – ಸಿ.ಟಿ. ರವಿ ವಿವಾದಿತ ಹೇಳಿಕೆಗೆ ಸವಿತಾ ಸಮಾಜದ ಆಕ್ರೋಶ | ಕ್ಷಮೆಯಾಚಿಸದಿದ್ದರೆ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆಯ ಎಚ್ಚರಿಕೆ

ಸಿ.ಟಿ. ರವಿ ವಿವಾದಿತ ಹೇಳಿಕೆಗೆ ಸವಿತಾ ಸಮಾಜದ ಆಕ್ರೋಶ

ಕ್ಷಮೆಯಾಚಿಸದಿದ್ದರೆ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆ ಎಚ್ಚರಿಕೆ

ರಿಪ್ಪನ್‌ಪೇಟೆ : ಮಾಜಿ ಸಚಿವ ಸಿ.ಟಿ. ರವಿ ರವರು ಸವಿತಾ ಸಮಾಜದ ಬಗ್ಗೆ ಅವಹೇಳನಕಾರಿ ಪದ ಬಳಸಿ ಮಾತನಾಡಿದ ಆರೋಪದ ಹಿನ್ನೆಲೆ, ರಿಪ್ಪನ್‌ಪೇಟೆ ಸವಿತಾ ಸಮಾಜ ಘಟಕದಿಂದ ಅವರ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ.

ಸಮಾಜದ ಸದಸ್ಯರು ನಾಡ ಕಚೇರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಸಿ.ಟಿ. ರವಿರವರು ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ರಾಜ್ಯದಾದ್ಯಂತ ಸಮಾಜದ ಬಾಂಧವರು ಉಗ್ರ ಪ್ರತಿಭಟನೆಗೆ ಇಳಿಯುವ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ನಡೆದ ಮಾತುಕತೆಯ ವೇಳೆ ಸಿ.ಟಿ. ರವಿರವರು ಸವಿತಾ ಸಮಾಜದ ಬಾಂಧವರ ಕುರಿತು ನಿಷೇಧಿತ ಪದ ಬಳಕೆ ಮಾಡಿದಂತಿದೆ ಎಂದು ಸಮಾಜದವರು ಆರೋಪಿಸಿದ್ದಾರೆ. “ಒಂದು ಜನಾಂಗವನ್ನು ಉದ್ದೇಶಿಸಿ ಈ ರೀತಿಯಾಗಿ ಮಾತನಾಡಿರುವುದು ಸಿ.ಟಿ. ರವಿ ಅವರ ಘನತೆಗೆ ಶೋಭೆತರುವಂತದ್ದಲ್ಲ,” ಎಂದು ಸಮಾಜದ ಪ್ರತಿನಿಧಿಗಳು ಹೇಳಿದ್ದಾರೆ.

“ಅವರು ತಕ್ಷಣವೇ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಬೃಹತ್ ಮಟ್ಟದ ಪ್ರತಿಭಟನೆಗಳನ್ನು ನಡೆಸುವಂತಾಗುತ್ತದೆ,” ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ರಿಪ್ಪನ್‌ಪೇಟೆ ಸವಿತಾ ಸಮಾಜದ ಅಧ್ಯಕ್ಷರಾದ ಸಿದ್ದೇಶ್ ಭಂಡಾರಿ ಕಾರ್ಯದರ್ಶಿ ಸುನೀಲ್‌ಕುಮಾರ್ ವೈ ಎಸ್ ,ಪದಾಧಿಕಾರಿಗಳಾದ ಕೆ ಎನ್ ಮಂಜುನಾಥ್ , ಬಾಲರಾಜ್ , ರಾಜೇಶ್ , ಅರುಣ , ವಾಸು , ಸತೀಶ್ ,ಚಿರಂತ್ , ಪಾಂಡುರಂಗ , ಮಂಜುನಾಥ್ ಬೈರಾಪುರ ಹಾಗೂ ಇನ್ನಿತರರು ಇದ್ದರು.