Headlines

ಕೌಟುಂಬಿಕ ಕಲಹ ಹಿನ್ನಲೆ ವಿಷ ಸೇವಿಸಿ ಗೃಹಿಣಿ ಸಾವು – ಪತಿ , ಮಾವನ ಬಂಧನ | ಅತ್ತೆ , ನಾದಿನಿ ಪರಾರಿ

ಕೌಟುಂಬಿಕ ಕಲಹ ಹಿನ್ನಲೆ ವಿಷ ಸೇವಿಸಿ ಗೃಹಿಣಿ ಸಾವು – ಪತಿ , ಮಾವನ ಬಂಧನ , ಅತ್ತೆ , ನಾದಿನಿ ಪರಾರಿ

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ವಿಷ ಸೇವಿಸಿದ್ದ ವಿವಾಹಿತ ಯುವತಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಮೃತಳನ್ನು ತೀರ್ಥಹಳ್ಳಿಯ ಕೋಣಂದೂರು ಸಮೀಪದ ಶಂಕರಳ್ಳಿ ಈಶ್ವರಪ್ಪನವರ ಮಗಳು ಪೂಜಾ (30) ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಎಂಬಾತನೊಂದಿಗೆ ಪೂಜಾಳ ವಿವಾಹವಾಗಿತ್ತು.

ಪತ್ನಿಯನ್ನು ವಿಷಕೊಟ್ಟು ಕೊಲೆಗೆ ಯತ್ನಿಸಲಾಗಿದೆ ಎಂಬ ಗಂಭೀರ ಆರೋಪ ಗಂಡ ಹಾಗೂ ಕುಟುಂಬದವರ ವಿರುದ್ಧ ಕೇಳಿಬಂದಿದೆ. ವಿಷ ಸೇವಿಸಿದ ಪೂಜಾಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.

ಪೂಜಾ ದಂಪತಿಗಳಿಗೆ ಎರಡು ವರ್ಷದ ಗಂಡು ಮಗುವಿದ್ದು, ಪತಿ ಶರತ್, ತಂದೆ ಸುಧಾಕರ್, ತಾಯಿ ರಾಧಾ ಹಾಗೂ ಸಹೋದರಿ ಶಬರಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವೂ ಕುಟುಂಬಸ್ಥರಿಂದ ಕೇಳಿ ಬಂದಿದೆ. ಈ ಹಿಂದೆ ಕೂಡಾ ಪೂಜಾ ಮೇಲೆ ಹಲ್ಲೆ ನಡೆದಿದ್ದುದಾಗಿ ತಿಳಿದುಬಂದಿದೆ.

ಎರಡು ದಿನಗಳ ಹಿಂದೆ ಕಳೆನಾಶಕ ನೀಡಿ ಕೊಲೆ ಮಾಡಲು ಯತ್ನಿಸಿ, ಅದನ್ನು ಆತ್ಮಹತ್ಯೆಯಂತೆ ತೋರಿಸಲು ಶರತ್ ಕುಟುಂಬ ಯತ್ನಿಸಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಪೂಜಾಳ ಕುಟುಂಬವು ಚಿಕ್ಕಮಗಳೂರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪತಿ ಶರತ್ ಮತ್ತು ತಂದೆ ಸುಧಾಕರ್ ಅವರನ್ನು ಬಂಧಿಸಿದ್ದಾರೆ. ಅತ್ತೆ ರಾಧಾ ಹಾಗೂ ಗಂಡನ ಅಕ್ಕ ಶಬರಿ ನಾಪತ್ತೆಯಾಗಿದ್ದಾರೆ.