Headlines

ಅ.6 ರಿಂದ ಅರಸಾಳು, ಕುಂಸಿಯಲ್ಲಿ ಇಂಟರ್ಸಿಟಿ ರೈಲು‌ ನಿಲುಗಡೆ

ಅ.6 ರಿಂದ ಅರಸಾಳು, ಕುಂಸಿಯಲ್ಲಿ ಇಂಟರ್ಸಿಟಿ ರೈಲು‌ ನಿಲುಗಡೆ

ಶಿವಮೊಗ್ಗ :  ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಬೆಂಗಳೂರು – ತಾಳಗುಪ್ಪ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ: 20651 / 20652) ನಿಲುಗಡೆಗೆ ಸೌಲಭ್ಯ ಒದಗಿಸಲು ತಾತ್ಕಾಲಿಕವಾಗಿ ಆದೇಶ ಹೊರಡಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.

ಈ ನಿಲುಗಡೆ ಸೌಲಭ್ಯವನ್ನು 2025ರ ಅಕ್ಟೋಬರ್ 6 ರಿಂದ 2026ರ ಜನವರಿ 5 ರವರೆಗೆ ಪ್ರಾಯೋಗಿಕ ಆಧಾರದ ಮೇಲೆ ಜಾರಿಗೊಳಿಸಿ ರೈಲ್ವೆ ಇಲಾಖೆಯು ಆದೇಶ ನೀಡಿದೆ.

ಈ ಹಿಂದೆ, ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ಇರಲಿಲ್ಲ. ಇದರಿಂದಾಗಿ ಈ ಪ್ರದೇಶಗಳ ಸಾರ್ವಜನಿಕ ಪ್ರಯಾಣಿಕರಿಂದ ರೈಲು ನಿಲುಗಡೆಗಾಗಿ ಬಹುದಿನಗಳಿಂದ ಬಲವಾದ ಬೇಡಿಕೆ ಮತ್ತು ಒತ್ತಡವಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ, ಸಂಸದ ಬಿ.ವೈ. ರಾಘವೇಂದ್ರ ಅವರು ಕಳೆದ ವಾರ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಮುಕುಲ್ ಸರಣ್ ಮಾಥುರ್ ಅವರನ್ನು ಭೇಟಿ ಮಾಡಿ ಈ ಕುರಿತು ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಟ್ಟಿದ್ದರು. ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಇಂಟರ್‌ಸಿಟಿ ರೈಲನ್ನು ನಿಲ್ಲಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವಂತೆ ಸಂಸದರು ಮನವಿ ಮಾಡಿಕೊಂಡಿದ್ದರು.ಸಂಸದರ ನಿರಂತರ ಪ್ರಯತ್ನದ ಫಲವಾಗಿ ನೈರುತ್ಯ ರೈಲ್ವೆ ವಲಯದಿಂದ ಇದೀಗ ಅನುಮತಿ ದೊರೆತಿದೆ.