Headlines

ಗ್ರಾಮೀಣ ಸಮಸ್ಯೆಗಳನ್ನು ಎತ್ತಿಹಿಡಿಯುವಲ್ಲಿ ಪತ್ರಕರ್ತರ ಪಾತ್ರ ಅಪಾರ – ಶಾಸಕ ಗೋಪಾಲಕೃಷ್ಣ ಬೇಳೂರು

ಗ್ರಾಮೀಣ ಸಮಸ್ಯೆಗಳನ್ನು ಎತ್ತಿಹಿಡಿಯುವಲ್ಲಿ ಪತ್ರಕರ್ತರ ಪಾತ್ರ ಅಪಾರ – ಶಾಸಕ ಗೋಪಾಲಕೃಷ್ಣ ಬೇಳೂರು

ಹೊಸನಗರ: “ಮಾಧ್ಯಮವು ಕೇವಲ ಸುದ್ದಿಯನ್ನು ಹಂಚುವ ಸಾಧನವಲ್ಲ, ಅದು ಸಮಾಜದ ದಿಕ್ಕು ತೋರಿಸುವ ಕನ್ನಡಿಯಾಗಿದೆ, “ಗ್ರಾಮೀಣ ಪ್ರದೇಶದ ಹತ್ತು ಹಲವು ಸಮಸ್ಯೆಗಳನ್ನು ಎತ್ತಿ ಹಿಡಿದು, ಅವುಗಳಿಗೆ ಪರಿಹಾರ ಕಲ್ಪಿಸಲು ರಾಜಕಾರಣಿಗಳ ಗಮನ ಸೆಳೆಯುವಲ್ಲಿ ಗ್ರಾಮೀಣ ಪತ್ರಕರ್ತರ ಪಾತ್ರ ಅಪಾರ,” ಎಂದು ಅವರು ಹೇಳಿದರು. ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಹೊಸನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಿಟ್ಟೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪತ್ರಿಕಾ ದಿನಾಚರಣೆ, ಸಾಧಕರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಪತ್ರಕರ್ತರು ಸಮಾಜದ ಕೈಗನ್ನಡಿಯಾಗಬೇಕು. ಪರ, ವಿರೋಧ ಎರಡನ್ನೂ ಸಮಾನವಾಗಿ ಸ್ವೀಕರಿಸಿ, ಊರಿನ ಮೂಲಭೂತ ಸೌಲಭ್ಯಗಳ ಬಗ್ಗೆ ಜನರ ಗಮನ ಸೆಳೆಯುವ ಕೆಲಸ ಮಾಡಬೇಕು. ಗ್ರಾಮೀಣ ಪತ್ರಕರ್ತರು ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ,” ಎಂದರು.

ಪತ್ರಿಕೋದ್ಯಮದ ಮೌಲ್ಯ ಕಾಪಾಡಬೇಕು – ಶಾಸಕ ಆರಗ ಜ್ಞಾನೇಂದ್ರ

ಸಾಧಕ ಪತ್ರಕರ್ತರನ್ನು ಸನ್ಮಾನಿಸಿದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, “ಒಂದು ಕಾಲದಲ್ಲಿ ಲಂಕೇಶ್, ಹಾಯ್ ಬೆಂಗಳೂರು ಮುಂತಾದ ಪತ್ರಿಕೆಗಳ ವರದಿಗಳಿಗಾಗಿ ಓದುಗರು ಕಾಯುತ್ತಿದ್ದ ಕಾಲವಿತ್ತು. ಆದರೆ ಇಂದಿನ ದಿನಗಳಲ್ಲಿ ಪತ್ರಿಕೋದ್ಯಮವು ವ್ಯಾಪಾರೋದ್ಯಮದತ್ತ ಹೆಚ್ಚು ಮುಖಮಾಡಿದೆ. ಮೌಲ್ಯಾಧಾರಿತ ಪತ್ರಿಕೋದ್ಯಮವೇ ಓದುಗರ ಮನ ಗೆಲ್ಲುತ್ತದೆ. ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಧ್ವನಿಯಾಗಿ ಪತ್ರಿಕೆಗಳು ರೂಪುಗೊಳ್ಳಬೇಕು,” ಎಂದು ಹೇಳಿದರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿದನೂರು ರವಿ ಅಧ್ಯಕ್ಷತೆ ವಹಿಸಿದರು. ಶಿಮುಲ್ ಅಧ್ಯಕ್ಷ ಹೆಚ್.ಎನ್. ವಿದ್ಯಾಧರ್ ಪತ್ರಿಕಾ ವಿತರಕರಿಗೆ ಪುರಸ್ಕಾರ ನೀಡಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಜಿಲ್ಲಾ ಕಾಂಗ್ರೆಸ್ ಯುವ ಮುಖಂಡ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಉದ್ಯಮಿ ಹಾಲಗದ್ದೆ ಉಮೇಶ್, ಮಾಮ್ಕೋಸ್ ನಿರ್ದೇಶಕ ಕೆ.ವಿ. ಕೃಷ್ಣಮೂರ್ತಿ, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮತಿ, ಸದಸ್ಯ ನಾಗೋಡಿ ವಿಶ್ವನಾಥ, ಕಾಲೇಜು ಸಿಡಿಸಿ ಉಪಾಧ್ಯಕ್ಷ ಜೆ.ವಿ.ಸುಬ್ರಹ್ಮಣ್ಯ, ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಗೋಪಾಲ ಕಟ್ಟಿನಮನೆ, ಸಹಶಿಕ್ಷಕ ಖಮರುಲ್ಲಾ ಸೇರಿದಂತೆ ಅನೇಕರು ಹಾಜರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ನಾಗೇಶ್ ಎಸ್.ನಾಯಕ್, ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಪತ್ರಿಕಾ ವಿತರಕರಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಯಕ್ಷಪಲ್ಲವಿ ಟ್ರಸ್ಟ್ (ರಿ.) ಮಾಳಕೋಡ ವತಿಯಿಂದ ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಅವರ ಗಾನಸಾರಥ್ಯದಲ್ಲಿ ‘ಯಕ್ಷ-ಗಾನ-ನೃತ್ಯ-ವೈಭವ’ ಪ್ರದರ್ಶಿಸಲಾಯಿತು.

ಪತ್ರಕರ್ತ ನಾಗರಕೊಡಿಗೆ ರವಿ ಸ್ವಾಗತಿಸಿದರು. ಅಶ್ವಿನಿ ಪಂಡಿತ್ ನಿರೂಪಿಸಿದರು.