ಧರ್ಮಸ್ಥಳದಲ್ಲಿ ನಾಲ್ವರು ಯೂಟ್ಯೂಬರ್ ಗಳ ಮೇಲೆ ಮಾರಣಾಂತಿಕ ಹಲ್ಲೆ
Four YouTubers attacked in Dharmasthala
ಧರ್ಮಸ್ಥಳ: ಧರ್ಮಸ್ಥಳದ ಸೌಜನ್ಯ ಮನೆಯ ಸಮೀಪ ಬಿಗ್‌ಬಾಸ್‌ನ ರಜತ್ ಎಂಬುವವರ ಸಂದರ್ಶನ ಮಾಡುತ್ತಿದ್ದ ನಾಲ್ಕು ಮಂದಿ ಯೂಟ್ಯೂಬರ್ ಗಳ ಮೇಲೆ ಸುಮಾರು 60-70 ಜನರಿದ್ದ ಧರ್ಮಸ್ಥಳದ ಕೆಲವು ಗೂಂಡಾಗಳು ದಾಳಿ ಮಾಡಿ, ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬುಧವಾರ ಸಂಜೆ ವರದಿಯಾಗಿದೆ.
ಧರ್ಮಸ್ಥಳದ ಸಮೀಪದ ಸೌಜನ್ಯ ಅವರ ಮನೆಯ ಬಳಿ ಸಂದರ್ಶನ ನಡೆಸುತ್ತಿದ್ದ ನಾಲ್ವರು ಯೂಟ್ಯೂಬರ್‌ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ದಾಳಿಗೆ ಒಳಗಾದವರು ಕುಡ್ಲ ರ್ಯಾಂಪೇಜ್ ಯೂಟ್ಯೂಬ್ ಚಾನೆಲ್‌ನ ಅಜಯ್ ಅಂಚನ್, ಯುನೈಟೆಡ್ ಮೀಡಿಯಾದ ಅಭಿಷೇಕ್, ಸಂಚಾರಿ ಸ್ಟುಡಿಯೋದ ವಿಜಯ್ ಮತ್ತು ಕುಡ್ಲ ರ್ಯಾಂಪೇಜ್‌ನ ಕ್ಯಾಮೆರಾ ಪರ್ಸನ್ ಎಂದು ಗುರುತಿಸಲಾಗಿದೆ. ಈ ದಾಳಿಯಲ್ಲಿ ಇವರಿಗೆ ತೀವ್ರ ಗಾಯಗಳಾಗಿದ್ದು, ಅವರ ಕ್ಯಾಮೆರಾ ಮತ್ತು ಇತರ ಉಪಕರಣಗಳನ್ನು ಧ್ವಂಸ ಮಾಡಲಾಗಿದೆ.
ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನ ಸ್ಪರ್ಧಿ ರಜತ್ ಅವರು ಸೌಜನ್ಯ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅವರನ್ನು ಸಂದರ್ಶನ ಮಾಡಲು ಈ ಯೂಟ್ಯೂಬರ್‌ಗಳು ತೆರಳಿದ್ದರು.
ಸೌಜನ್ಯ ಅವರ ಮನೆಯ ಪಾಂಗಳ ಕ್ರಾಸ್ ಸಮೀಪ ಈ ಸಂದರ್ಶನ ನಡೆಯುತ್ತಿದ್ದಾಗ, ಸುಮಾರು 50 ರಿಂದ 100 ಜನರ ದೊಡ್ಡ ಗುಂಪು ಇವರ ಮೇಲೆ ಹಠಾತ್ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ದಾಳಿ ನಡೆಸಿದವರು “ಧರ್ಮಸ್ಥಳದ ಹೆಸರು ಕೆಡಿಸುತ್ತಿದ್ದೀರಿ” ಎಂದು ಆರೋಪಿಸಿ, ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದಾಳಿಯಲ್ಲಿ ಗಾಯಗೊಂಡ ಎಲ್ಲರನ್ನು ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಅವರೊಂದಿಗೆ ಮಾತನಾಡಿದ ಹೋರಾಟಗಾರರ ಪ್ರಕಾರ, ಘಟನೆ ನಡೆದು ಅರ್ಧ ಗಂಟೆಯಷ್ಟೇ ಆಗಿದ್ದು, ತಕ್ಷಣವೇ ಉನ್ನತ ಮಟ್ಟದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಗೂಂಡಾಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯನ್ನು ಕರ್ನಾಟಕದ ಡಿಜಿಟಲ್ ಮಾಧ್ಯಮಗಳ ವೇದಿಕೆಯಾದ ಡಿಜಿಟಲ್ ಮೀಡಿಯಾ ಫಾರ್ ಡೆಮಾಕ್ರಸಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದೆ.
ಈ ಘಟನೆಯು ಕರ್ನಾಟಕದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿಯಾಗಿದೆ ಎಂದು ವ್ಯಾಪಕವಾಗಿ ಖಂಡಿಸಲಾಗುತ್ತಿದೆ.
Four YouTubers attacked in Dharmasthala