ಇಬ್ಬರು ಬಾಲಕಿಯರ ಅನುಮಾನಾಸ್ಪದ ಸಾವು – ನ್ಯಾಯಕ್ಕಾಗಿ ಆಗ್ರಹಿಸಿ ಭಾರೀ ಪ್ರತಿಭಟನೆ

ಇಬ್ಬರು ಬಾಲಕಿಯರ ಅನುಮಾನಾಸ್ಪದ ಸಾವು – ನ್ಯಾಯಕ್ಕಾಗಿ ಆಗ್ರಹಿಸಿ ಭಾರೀ ಪ್ರತಿಭಟನೆ

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಒಂದು ವರ್ಷದ ಅಂತರದಲ್ಲಿ ಇಬ್ಬರು ಬಾಲಕಿಯರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಶಾಲಾ ಆಡಳಿತ ಮತ್ತು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಸರಣಿ ಸಾವುಗಳಿಗೆ ಸಮಗ್ರ ತನಿಖೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಇಂದು (ಜುಲೈ 7) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಕರ್ನಾಟಕ ವಿದ್ಯಾರ್ಥಿ ಸಂಘಟನೆ (KVS) ಹಾಗೂ ಇತರ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಈ ಪ್ರತಿಭಟನೆಗೆ ಕರ್ನಾಟಕ ಜನಶಕ್ತಿಯು ಬೆಂಬಲವನ್ನು ವ್ಯಕ್ತಪಡಿಸಿತ್ತು.

ಸರಣಿ ಸಾವಿನ ಸುತ್ತ ಅನುಮಾನದ ಹುತ್ತ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿಯಲ್ಲಿ ಓದುತ್ತಿದ್ದ ಬೊಮ್ಲಾಪುರ ಗ್ರಾಮದ ಶಮಿತಾ (14) ಜೂನ್ 29ರ ಭಾನುವಾರ ಶವವಾಗಿ ಪತ್ತೆಯಾಗಿದ್ದರು. ಆರಂಭದಲ್ಲಿ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ಸಣ್ಣ ವಯಸ್ಸಿನ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ವಾದ ಸಾರ್ವಜನಿಕರಲ್ಲಿ ಭಾರೀ ಅನುಮಾನ ಮೂಡಿಸಿತ್ತು. ಈ ಅನುಮಾನಕ್ಕೆ ಮತ್ತಷ್ಟು ಬಲ ಸಿಕ್ಕಿದ್ದು, ಇದೇ ಶಾಲೆಯಲ್ಲಿ 2023ರ ಜುಲೈ 27ರಂದು ಕೊಪ್ಪ ತಾಲೂಕಿನ ನಾರ್ವೆ ಗ್ರಾಮದ ಅಮೂಲ್ಯ ಎಂಬ 14 ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ಗಮನಾರ್ಹವೆಂದರೆ, ಇಬ್ಬರೂ ಬಾಲಕಿಯರ ಶವ ಒಂದೇ ಜಾಗದಲ್ಲಿ ಪತ್ತೆಯಾಗಿವೆ.

ಶಾಸಕ ಟಿ.ಡಿ. ರಾಜೇಗೌಡ ಅವರು ಈ ದುರಂತಗಳ ಬಗ್ಗೆ ಸಾರ್ವಜನಿಕರಲ್ಲಿರುವ ಅನುಮಾನವನ್ನು ಹಂಚಿಕೊಂಡು, “ಬಾಲಕಿಯ ಸಾವಿನ ಸಮಗ್ರ ತನಿಖೆಯಾಗಬೇಕು ಎನ್ನುವ ಉದ್ದೇಶದಿಂದಲೇ ಶಿವಮೊಗ್ಗ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ವರದಿ ಬಂದ ಕೂಡಲೇ ಪ್ರಾಮಾಣಿಕ ತನಿಖೆ ಮಾಡಿಸಲಾಗುವುದು. ವಸತಿ ಶಾಲೆಯಲ್ಲಿ ಎಲ್ಲಾ ಅಧಿಕಾರಿ, ಪೋಷಕರನ್ನು ಕರೆಯಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿಸಲಾಗುವುದು” ಎಂದು ಭರವಸೆ ನೀಡಿದ್ದರು.

ಪ್ರತಿಭಟನಾ ಮೆರವಣಿಗೆಯು ಬೆಳಿಗ್ಗೆ 10 ಗಂಟೆಗೆ ಪ್ರಾರಂಭಿಸಲಾಗಿತ್ತು. ಕೊಪ್ಪ ಟೌನ್‌ಹಾಲ್‌ನಿಂದ ಬಸ್ ನಿಲ್ದಾಣದವರೆಗೆ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಯಿತು. ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮದಲ್ಲಿ ಪೋಷಕರು ಮತ್ತು ಸಾರ್ವಜನಿಕರು ಶಾಲಾ ಆಡಳಿತ ಮಂಡಳಿ, ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೃತ ಬಾಲಕಿಯರ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವ ಹೋರಾಟಕ್ಕೆ ಸಾರ್ವಜನಿಕರು ಕೈಜೋಡಿಸುವಂತೆ ಪ್ರಗತಿಪರ ಸಂಘಟನೆಗಳ ಸಂಘಟಕರು ಮನವಿ ಮಾಡಿದ್ದರು.

ಪ್ರಮುಖ ಬೇಡಿಕೆಗಳು ಮತ್ತು ಎಚ್ಚರಿಕೆ: ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಹಾಗೂ ಹೋರಾಟಗಾರ ಕೆ.ಎಲ್. ಅಶೋಕ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, “ಈ ಸಾವುಗಳು ಇಲ್ಲಿಗೆ ನಿಲ್ಲಬೇಕು. ಮಕ್ಕಳ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರಿರುವ ಶಾಲೆಯ ಪ್ರಿನ್ಸಿಪಾಲ್ ಹಾಗೂ ಸಿಬ್ಬಂದಿಗಳನ್ನು ಈ ಕೂಡಲೇ ಅಮಾನತುಗೊಳಿಸಿ, ಅವರ ವಿರುದ್ಧ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು. ಅಲ್ಲದೆ, “ಇಲ್ಲವಾದಲ್ಲಿ, ಕರ್ನಾಟಕ ಜನಶಕ್ತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ (KVS), ಮಹಿಳಾ ಮುನ್ನಡೆ, ಕರ್ನಾಟಕ ಶ್ರಮಿಕ ಶಕ್ತಿ ಸೇರಿದಂತೆ ಹಲವು ಸಂಘಟನೆಗಳು ಸೇರಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತೇವೆ” ಎಂದು ಕಠಿಣ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಮಾತನಾಡಿದ ವಕೀಲರಾದ ಸುಧೀರ್ ಕುಮಾರ್ ಮೂರೋಳ್ಳಿ, “ಎಲ್ಲಾ ಸಂಘಟನೆಗಳು ಸೇರಿ ಮಾಡುತ್ತಿರುವ ಈ ಹೋರಾಟ ತುಂಬಾ ಸ್ವಾಗತಾರ್ಹವಾದುದು. ಈ ಸಾವುಗಳಿಗೆ ಖಂಡಿತ ನ್ಯಾಯ ಸಿಗುತ್ತದೆ” ಎಂಬ ಭರವಸೆಯ ನುಡಿಗಳನ್ನಾಡಿದರು.

ಶಮಿತಾಳ ಚಿಕ್ಕಮ್ಮ ರಾಜೀವಿ ಅವರು ದುಃಖಿತರಾಗಿ, “ಯಾವುದೇ ಕಾರಣಕ್ಕೂ ಇದನ್ನು ಆತ್ಮಹತ್ಯೆ ಎಂದು ಕರೆಯಬೇಡಿ” ಎಂದು ಆಗ್ರಹಿಸಿ, “ಇಷ್ಟು ವರ್ಷ ಆದರೂ ಶಾಲೆಯ ಅವ್ಯವಸ್ಥೆಗಳನ್ನು ಯಾಕೆ ಸರಿಪಡಿಸಲಿಲ್ಲ? ಇಲಾಖೆ ಏನು ಮಾಡುತ್ತಿದೆ?” ಎಂದು ಪ್ರಶ್ನಿಸಿದರು.

KVS ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಮುಖಂಡ ರಾಜಿತ್ ಮಾತನಾಡಿ, “ಈ ಸಾವಿನ ಬಗ್ಗೆ ನಮ್ಮ ಸಂಘಟನೆ ಗಂಭೀರವಾಗಿ ಪರಿಗಣಿಸಿದ್ದು, ಈ ಅನುಮಾನಾಸ್ಪದ ಸಾವಿಗೆ ನ್ಯಾಯ ಸಿಗುವವರೆಗೂ ಅವರ ಪೋಷಕರ ಜೊತೆಗೆ ನಿಲ್ಲುತ್ತದೆ” ಎಂದು ಪ್ರತಿಜ್ಞೆ ಮಾಡಿದರು.

ಈ ಸಭೆಯಲ್ಲಿ ಮಹಿಳಾ ಮುನ್ನಡೆಯ ರಾಧಾ ಹಾಗಲಗಂಚಿ, ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗಡಿಕಲ್, ದಲಿತ ಮುಖಂಡರಾದ ರಾಜಾ ಶಂಕರ್, ಕುಂಚೂರ್ ವಾಸು, ರವೀಂದ್ರ ಮೊದಲಾದವರು ಮಾತನಾಡಿ, ಬಾಲಕಿಯರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಆನಂದ್ ಬೆಳಗೊಳ ಪ್ರಾಸ್ತಾವಿಕ ನುಡಿಗಳನ್ನಾಡಿದರು.