ANANDAPURA | ವೃದ್ದೆಯ ಮೇಲೆ ಹಲ್ಲೆ ಪ್ರಕರಣ : ಮಾಹಿತಿ ಕೇಳಿದ ಸಿಎಂ ಕಚೇರಿ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಗೌತಮಪುರ ಗ್ರಾಮದಲ್ಲಿ ವೃದ್ಧೆಯೊಬ್ಬರಿಗೆ ಮನೆಯ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ನೆರೆಮನೆಯವರು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದ ಅಮಾನವೀಯ ಘಟನೆ ಕುರಿತು ಮುಖ್ಯಮಂತ್ರಿಗಳ ಕಚೇರಿ (CMO) ಮಧ್ಯಪ್ರವೇಶಿಸಿದೆ.
ಮಾಧ್ಯಮ ವರದಿಗಳನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದು ಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು (OSD) ತಕ್ಷಣವೇ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಸೂಚನೆಯ ಬೆನ್ನಲ್ಲೇ, ಪ್ರಕರಣದ ತನಿಖೆ ಕೈಗೊಂಡು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಆನಂದಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರವೀಣ್ ಎಸ್ ಪಿ ಸಿಎಂ ಕಚೇರಿಗೆ ವರದಿ ಸಲ್ಲಿಸಿದ್ದಾರೆ.
ಈ ಸಂಬಂದ ಮುಖ್ಯಮಂತ್ರಿಗಳ ಕಚೇರಿಯಿಂದ ಮಾಧ್ಯಮ ಪ್ರಕಟಣೆಯನ್ನು ಎಕ್ಸ್ ಅಕೌಂಟ್ನಲ್ಲಿ ನೀಡಲಾಗಿದೆ. ಇಂತಹ ಘಟನೆಗಳು ಬೆಳಕಿಗೆ ಬಂದಾಗ, ಮುಖ್ಯಮಂತ್ರಿಗಳ ಕಚೇರಿಯ ಕುಂದು ಕೊರತೆವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು @osd_cmkarnataka ಎಕ್ಸ್ ಖಾತೆಯ ಮೂಲಕ ಸಾರ್ವಜನಿಕರಿಂದ ನೇರವಾಗಿ ಸಮಸ್ಯೆ ಗಳನ್ನು ಸ್ವೀಕರಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ.
ಅದರಂತೆ ಆನಂದಪುರದಲ್ಲಿನ ಪ್ರಕರಣದಲ್ಲಿಯು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾ ರಿಗಳಿಗೆ ಸೂಚಿಸಿದ್ದರು. ಈ ಸೂಚನೆ ಬೆನ್ನಲ್ಲೆ ಆನಂದಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣಕ್ಕೆ ಅನ್ವಯಿಸಿ ಕೈಗೊಂಡ ಕಾನೂನು ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ವಿವರ ಸಲ್ಲಿಸಿದ್ದಾರೆ. ಈ ಬಗ್ಗೆ ಎಕ್ಸ್ ಅಕೌಂಟ್ನಲ್ಲಿ ಫೋಸ್ಟ್ ಹಾಕಲಾಗಿದ್ದು, ನಾಗರಿಕರು ತಾವು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಈ ‘ಎಕ್ಸ್’ ಖಾತೆಗೆ ಟ್ಯಾಗ್ ಮಾಡುವ ಮೂಲಕ ಮುಖ್ಯಮಂತ್ರಿಗಳ ಕಚೇರಿಯ ಗಮನಕ್ಕೆ ತರಬಹುದು. ಈ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಲಾಗಿದೆ.
ಘಟನೆಯ ವಿವರ
ಜೂನ್ 30ರಂದು ವರದಿಯಾದಂತೆ, ಸಾಗರ ತಾಲೂಕಿನ ಗೌತಮಪುರದ ನಿವಾಸಿ ಹುಚ್ಚಮ್ಮ ಎಂಬ ವೃದ್ಧೆಯ ಮನೆ ಕಡೆ ಪಕ್ಕದ ಮನೆಯ ಮಹಿಳೆಯೊಬ್ಬರು ಕಸ ತಂದು ಹಾಕಿದ್ದಾರೆ ಎನ್ನಲಾಗಿದೆ. ಇದನ್ನು ಹುಚ್ಚಮ್ಮ ಅವರು ಪ್ರಶ್ನಿಸಿದಾಗ, ಆ ಮಹಿಳೆ ಕೋಪಗೊಂಡು, ವೃದ್ಧೆ ಹುಚ್ಚಮ್ಮ ಅವರನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಅಮಾನವೀಯ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಘಟನೆ ನಡೆದ ನಂತರ, ಹುಚ್ಚಮ್ಮ ಅವರ ಮಗ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ತಂದೆ-ತಾಯಿಗೆ ರಕ್ಷಣೆ ನೀಡಿ, ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದರು. ದೂರಿನ ಆಧಾರದ ಮೇಲೆ, ಹಲ್ಲೆ ನಡೆಸಿದ ಮಹಿಳೆ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದರು.