ANANDAPURA | ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್ ಲಾರಿ ಪಲ್ಟಿ : ಕೋಳಿಗಾಗಿ ಮುಗಿಬಿದ್ದ ಚಿಕನ್ ಪ್ರಿಯರು..
ಶಿವಮೊಗ್ಗ – ಕಡೂರಿನಿಂದ ಸಾಗರಕ್ಕೆ ಹೊರಟಿದ್ದ ಕೋಳಿ ತುಂಬಿದ್ದ ಕ್ಯಾಂಟರ್ ಲಾರಿ ಪಲ್ಟಿಯಾಗಿ ನೂರಾರು ಕೋಳಿಗಳು ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕು ಆನಂದಪುರಂ ಬಳಿಯ ಮುಂಬಾಳು ಕೆರೆ ಏರಿ ಮೇಲೆ ಇಂದು ಬೆಳಗ್ಗೆ ನಡೆದಿದೆ.
ಸಾಗರ ತಾಜ್ ಟ್ರೇಡರ್ಸ್ಗೆ ಕಡೂರಿನಿಂದ ಸುಮಾರು ನಾಲ್ಕೂವರೆ ಟನ್ನಷ್ಟು ಕೋಳಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಕಾರು ಅಡ್ಡ ಬಂದ ಕಾರಣ ಕ್ಯಾಂಟರ್ ಲಾರಿ ಪಲ್ಟಿಯಾಗಿದೆ. ಇದರಿಂದ ಸುಮಾರು 700ಕ್ಕೂ ಹೆಚ್ಚು ಕೋಳಿಗಳು ರಸ್ತೆಯಲ್ಲಿಯೇ ಅಫಾತಕ್ಕೀಡಾಗಿ ಸಾವನ್ನಪ್ಪಿವೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ.
ಪುಕ್ಸಟ್ಟೆ ಕೋಳಿಗೆ ಮುಗಿಬಿದ್ದ ಜನ: ಕ್ಯಾಂಟರ್ ಲಾರಿಯಿಂದ ರಸ್ತೆಗೆ ಬಿದ್ದಿದ್ದ ನೂರಾರು ಕೋಳಿಗಳು ಒದ್ದಾಡುತ್ತಿದ್ದರೆ, ಇನ್ನೂ ಕೆಲವು ಕೋಳಿಗಳು ಸಾವನ್ನಪ್ಪಿದ್ದವು. ರಸ್ತೆಯಲ್ಲಿ ಬಿದ್ದಿದ್ದ ಕೋಳಿಯನ್ನು ದಾರಿಯಲ್ಲಿ ಹೋಗುವವರು ತಮ್ಮ ವಾಹನವನ್ನು ರಸ್ತೆಯಲ್ಲಿಯೇ ಬಿಟ್ಟು ನನಗೊಂದು, ನಮ್ಮ ಮನೆಗೊಂದು ಎಂಬಂತೆ ಕೋಳಿಗಳನ್ನು ಹಿಡಿದು ತೆಗೆದುಕೊಂಡು ಹೋಗುತ್ತಿದ್ದರು.
ಆದರೆ ಕ್ಯಾಂಟರ್ ಚಾಲಕ ಮೂಕ ಪ್ರೇಕ್ಷಕನಾಗಿ ನಿಂತು ನೋಡುತ್ತಿದ್ದರು. ಸದ್ಯ ಕ್ಯಾಂಟರ್ ಅನ್ನು ರಸ್ತೆಯಿಂದ ತೆರವು ಮಾಡಲಾಗಿದೆ.
ಸ್ಥಳಕ್ಕೆ ಆಗಮಿಸಿದ ಆನಂದಪುರಂ ಪೊಲೀಸರು ಸಂಚಾರ ಮುಕ್ತಗೊಳಿಸಿದ್ದಾರೆ.