ವಿಟಮಿನ್ ಎ ಡ್ರಾಪ್‌ನಿಂದ ಅಸ್ವಸ್ಥರಾಗಿದ್ದ 13 ಮಕ್ಕಳು ಚೇತರಿಕೆಯತ್ತ
ಶಿವಮೊಗ್ಗ: ವಿಟಮಿನ್ ಎ ಡ್ರಾಪ್ ಪಡೆದು ಅಸ್ವಸ್ಥರಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ಹಿರೆಸಾನಿಯ ಅಂಗನವಾಡಿಯ ಎಲ್ಲಾ ೧೩ ಮಕ್ಕಳು ಚೇತರಿಸಿಕೊಂಡಿದ್ದು, ನಾಳೆ ಬಿಡುಗಡೆ ಆಗುವ ಸಾಧ್ಯತೆ ಇದೆ.
ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇಸಾನಿ ಗ್ರಾಮದ ೧೩ ಮಕ್ಕಳಿಗೆ ಗುರುವಾರ ಮಧ್ಯಾಹ್ನ ಇರುಳುಗಣ್ಣು ಮುಂಜಾಗ್ರತಾ ಕ್ರಮವಾಗಿ ವಿಟಮಿನ್ ಎ ಡ್ರಾಪ್ ಹಾಕಲಾಗಿತ್ತು. ನಂತರ ಸಂಜೆಯಿಂದ ೧೩ ಮಕ್ಕಳಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಿಪ್ಪನ್‌ಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೂ ಆರೋಗ್ಯ ಸುಧಾರಿಸದ ಹಿನ್ನಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್‌ಗೆ ರವಾನಿಸಲಾಗಿತ್ತು.
ಮೆಗ್ಗಾನ್‌ನಲ್ಲಿ ಮಕ್ಕಳ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಮಕ್ಕಳೆಲ್ಲರೂ ಆರಾಮವಾಗಿದ್ದಾರೆ. ಇಂದು ಅವರಲ್ಲಿ ಚೇತರಿಕೆ ಕಂಡುಬಂದಿದೆ. ಮೂವರು ಮಕ್ಕಳಲ್ಲಿ ಇನ್ನೂ ಸ್ವಲ್ಪ ಅಂಶ ಅನಾರೋಗ್ಯವಿದೆ.ಅನಾರೋಗ್ಯಕ್ಕೆ ತುತ್ತ್ತಾದ ಮಕ್ಕಳೆಂದರೆ, ರಶ್ಮಿತಾ, ಮನ್ವಿತ್, ಹಿತಿಕ್ಷಾ, ರವಿಕಲಾ, ಧನುಷ್, ಹಿತಾ, ಶ್ರೇಯಸ್, ಶಶಾಂಕ್, ತನ್ವಿತಾ, ಧ್ರುವಿಕಾ, ಸಿಂಚನಾ ಮತ್ತು ಆರ್ಯಾ.
ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ರಾತ್ರ್ರಿಯೇ ರಾಜಕೀಯ ಮುಖಂಡರು, ಅಧಿಕಾರಿಗಳು ಆಸ್ಪತ್ರ್ರೆಗೆ ಧಾವಿಸಿ ಮಕ್ಕಳ ಆರೋಗ್ಯ ವಿಚಾರಿಸಿದರು ಮತ್ತು ಸೂಕ್ತ ಚಿಕಿತ್ಸೆಗೆ ಆದೇಶಿಸಿದರು. ಶಾಸಕ ಬೇಳೂರು ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಸಿಇಓ , ಡಿಎಚ್‌ಓ ಡಾ|| ನಟರಾಜ್, ಜಿಲ್ಲಾ ಸಚಿವರ ಆಪ್ತ ಕಾರ್ಯದರ್ಶಿ, ಮೆಗ್ಗಾನ್ ಆಸ್ಪತ್ರೆ ಸಮಿತಿಯವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಮತ್ತು ಮುಖಂಡರು ಆಗಮಿಸಿ ಆರೋಗ್ಯ ವಿಚಾರಿಸಿದರು.
ಇಂದು ಶುಕ್ರವಾರ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಹೊಸನಗರ ತಾಲೂಕು ಅಂಗನವಾಡಿ ಮೇಲ್ವಿಚಾರಕಿ ಗಾಯತ್ರಿ, ಮಕ್ಕಳು ಈಗ ಸುಧಾರಿಸಿಕೊಂಡಿದ್ದಾರೆ. ಇನ್ನು ಒಂದು ದಿನ ಅವರಿಗೆ ಚಿಕಿತ್ಸೆಯ ಅವಶ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಯಾರೂ ಹೆದರುವ ಅವಶ್ಯಕತೆ ಇಲ್ಲ. ವಿಟಮಿನ್ ಎ ಡ್ರಾಪ್‌ನಿಂದ ತೊಂದರೆಯಾಗಿದೆ. ಮಕ್ಕಳೆಲ್ಲರೂ ಆರೋಗ್ಯವಾಗಿದ್ದರೆ ಎಂದರು.
ಘಟನೆ ಬಗ್ಗೆ ಮಾಹಿತಿ ನೀಡಿದ ಅಂಗನವಾಡಿಯ ಶಿಕ್ಷಕಿ ಕಮಲಾಶ್ರೀ, ಎಲ್ಲಾ ಅಂಗನವಾಡಿ ಮಕ್ಕಳಿಗೆ ವಿಟಮಿನ್ ಎ ಡ್ರಾಪ್ ಹಾಕಲಾಗುತ್ತಿದೆ. ಆದರೆ ನಮ್ಮ ಅಂಗನವಾಡಿಯಲ್ಲಿ ಮಾತ್ರ ಸ್ವಲ್ಪ ವ್ಯತ್ಯಾಸವಾಗಿದ. ಇದು ಪಾಲಕರಲ್ಲಿ ಮತ್ತು ಸ್ಥಳೀಯರಲ್ಲಿ ಗಾಬರಿ ಹುಟ್ಟಿಸಿತ್ತು. ಮೆಗ್ಗಾನ್‌ಗೆ ಕರೆತಂದ ಮೇಲೆ ಮಕ್ಕಳು ಗುಣಮುಖರಾಗಿದ್ದ್ದಾರೆ. ಎಂದಿನಂತೆ ಚಟುವಟಿಕೆಯಲ್ಲಿದ್ದಾರೆ ಎಂದರು.
ಮಕ್ಕಳೆಲ್ಲರಿಗೂ ಆರೋಗ್ಯ ಮಿತ್ರ ಮತ್ತು ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.