ಸೂಟ್‌ಕೇಸಿನಲ್ಲಿ ಬಾಲಕಿ ಶವ ಪತ್ತೆ ಕೇಸ್ – ಅತ್ಯಾ*ಚಾರ ನಡೆಸಿ ಕೊಲೆಗೈದ 7 ಮಂದಿ ಬಂಧನ
ರೈಲ್ವೆ ಬ್ರಿಡ್ಜ್ ಬಳಿ ಸೂಟ್‌ಕೇಸ್‌ನಲ್ಲಿ ಪತ್ತೆಯಾದ 17 ವರ್ಷದ ಯುವತಿಯ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಅತ್ಯಾ*ಚಾರ ಮತ್ತು ಕೊಲೆ ಆರೋಪದ ಮೇಲೆ ಬಂಧಿತರ ಪೈಕಿ ಇಬ್ಬರು ಅಪ್ರಾಪ್ತರು ಸೇರಿದ್ದಾರೆ.

ಬೆಂಗಳೂರು (ಜೂ.8): ಸಿಲಿಕಾನ್ ಸಿಟಿ ಬೆಂಗಳೂರು ನಗರದ ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿಯ ರೈಲು ಹಳಿ ಬಳಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. 17 ವರ್ಷದ ಬಾಲಕಿಯನ್ನು ಅತ್ಯಾ*ಚಾರ ಮಾಡಿ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬಿಹಾರ ಮೂಲದ 7 ಜನ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಬಂಧಿತರ ಪೈಕಿ ಇಬ್ಬರು ಅಪ್ರಾಪ್ತರು ಆಗಿದ್ದಾರೆ.
ಬಂಧಿತ ಆರೋಪಿಗಳು: ಆಶಿಕ್ ಕುಮಾರ್ (22), ಮುಖೇಶ್ ರಾಜಬನ್ಶಿ (35), ಇಂದುದೇವಿ (32), ರಾಜರಾಮ್ ಕುಮಾರ್ (18), ಪಿಂಟು ಕುಮಾರ್ (18), ಕಾಲು ಕುಮಾರ್ (17), ರಾಜು ಕುಮಾರ್ (17) ಎಂಬವರನ್ನು ಬಂಧಿಸಲಾಗಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ A1 ಆರೋಪಿ ಆಶೀಕ್ ಕುಮಾರ್ ಬೆಂಗಳೂರಿನ ಕಾಚನಾಯಕನಹಳ್ಳಿಯಲ್ಲಿ ವಾಸವಾಗಿದ್ದನು. ಕಳೆದ ಮೇ 13ನೇ ತಾರೀಕು ಬಿಹಾರಕ್ಕೆ ತೆರಳಿದ್ದನು. ಕೇವಲ ಎರಡೇ ದಿನದಲ್ಲಿ ಬಿಹಾರದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯನ್ನ ಪ್ರೀತಿಸುವ ನಾಟಕವಾಡಿ ತನ್ನ ಬಲೆಗೆ ಬೀಳಿಸಿಕೊಂಡಿದ್ದನು. ಆಶಿಕ್ ಕುಮಾರನ ಪ್ರೀತಿಯ ಬಲೆಗೆ ಬಿದ್ದ ಬೆಲಾರು ಗ್ರಾಮದ ನಿವಾಸಿ ರೀಮಾ ಕುಮಾರಿ (17) ತಾನು ನಿನ್ನೊಂದಿಗೆ ಜೀವನ ಮಾಡಲು ಸಿದ್ಧ ಎಂದು ಹೇಳಿದ್ದಾಳೆ. ಆಗ ಯುವತಿ ಇನ್ನೂ ಅಪ್ರಾಪ್ತೆ ಆಗಿದ್ದರೂ ಆಕೆಯನ್ನು ಕರೆದುಕೊಂಡು ಬೆಂಗಳೂರಿಗೆ ಓಡಿ ಹೋಗಲು ಸಿದ್ಧತೆ ನಡೆಸಿದ್ದಾನೆ.
ಅದರಂತೆ ಯುವತಿ ರೀಮಾ ಕುಮಾರಿಯನ್ನು ಕರೆದುಕೊಂಡು ಮೇ 15ರಂದು ಬಿಹಾರದಿಂದ ಬೆಂಗಳೂರಿಗೆ ಹೊರಟಿದ್ದಾನೆ. ಯುವತಿಯ ಜೊತೆಗೆ ಬೆಂಗಳೂರಿಗೆ ಮೇ 18ರಂದು ಆಗಮಿಸಿದ್ದಾರೆ. ಅಂದು ರಾತ್ರಿಯವರೆಗೂ ಬೆಂಗಳೂರು ನಗರವನ್ನು ತೋರಿಸಿದ್ದಾನೆ. ನಗರವನ್ನು ಸುತ್ತಾಡುವಾಗ ಆಕೆ ಕೇಳಿದ್ದ ತಿಂಡಿ, ಊಟವನ್ನು ಕೊಡಿಸಿ ಚೆನ್ನಾಗಿ ನೋಡಿಕೊಳ್ಳುವ ನಾಟಕ ಮಾಡಿದ್ದಾನೆ. ಇದಾದ ನಂತರ ರಾತ್ರಿ ವೇಳೆಗೆ ಆಶೀಕ್ ಕುಮಾರ್ ತನ್ನ ಸಂಬಂಧಿ ಮುಖೇಶ್ ಮನೆಗೆ ಯುವತಿ ಕರೆದುಕೊಂಡು ಬಂದಿದ್ದಾನೆ.
ಮುಖೇಶನ ಮನೆಯಲ್ಲಿ 3 ದಿನಗಳನ್ನು ಕಳೆದ ಯುವತಿ ರೀಮಾ ಕುಮಾರಿಯನ್ನು ಆಶೀಕ್ ಕುಮಾರ್ ಲೈಂಗಿಕವಾಗಿ ಮುಕ್ಕಿರಿದಿದ್ದಾನೆ. ಆದರೆ, ಮದುವೆಗೂ ಮುಂಚಿತವಾಗಿ ತನ್ನನ್ನು ಹೆಂಡತಿಗಿಂತ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದ ಆಶೀಕ್‌ಗೆ ಲೈಂಗಿಕ ಕ್ರಿಯೆಗೆ ಸಹಕರಿಸದೇ ಗಲಾಟೆ ಮಾಡಿದ್ದಾಳೆ. ಈ ವೇಳೆ ಆಶೀಕ್ ಬಾಲಕಿಯ ಖಾಸಗಿ ಬಾಗಕ್ಕೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾನೆ. ನಂತರ, ಕಬ್ಬಿಣದ ರಾಡ್‌ನಿಂದಲೂ ಬಾಲಕಿಗೆ ಹಲ್ಲೆ ನಡೆಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೇ ಬಾಲಕಿಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಇದಾದ ನಂತರ ತಾನು ಬಿಹಾರದಿಂದ ಕರೆದುಕೊಂಡು ಬಂದ ಬಾಲಕಿಯನ್ನು ಕೊಲೆ ಮಾಡಿದ್ದಾಗಿ ಸಂಬಂಧಿಕರಿಗೆ ತಿಳಿಸಿದ್ದಾನೆ. ಆಗ ಎಲ್ಲರೂ ಪ್ಲಾನ್ ಮಾಡಿ ಬಾಲಕಿ ಶವವನ್ನು ಸಾಗಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ಕ್ಯಾಬ್ ಮೂಲಕ ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ತೆಗೆದುಕೊಂಡು ಹೋಗಿ, ರೈಲು ಹಳಿಯಿಂದ ಕೆಳಕ್ಕೆ ಸೂಟ್ ಕೇಸ್ ಎಸೆದು ಎಸ್ಕೇಪ್ ಆಗಿದ್ದಾನೆ. ಚಲಿಸುವ ರೈಲಿನಿಂದ ಯುವತಿ ಶವ ಎಸೆದಿರುವಂತೆ ಬಿಂಬಿಸಲು ಯತ್ನ ಮಾಡಿದ್ದಾರೆ. ಈ ಘಟನೆಯ ಬಳಿಕ ಎಲ್ಲ ಆರೋಪಿಗಳು ಬಿಹಾರ ರಾಜ್ಯಕ್ಕೆ ಹೋಗಿದ್ದಾರೆ.
ಬೆಂಗಳೂರಿನಲ್ಲಿ ಆರೋಪಿಗಳ ಚಲನವಲನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಆರೋಪಿಗಳು ಸೂಟ್ ಕೇಸ್‌ನಲ್ಲಿ ಶವ ಸಾಗಿಸುವ ದೃಶ್ಯಗಳು ಸೆರೆಯಾಗಿವೆ. ಸಿಸಿ ಕ್ಯಾಮರಾಗಳ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಬೆಂಗಳೂರಿನಿಂದ ಬಿಹಾರಕ್ಕೆ ತೆರಳಿದ ಬೆಂಗಳೂರಿನ ಸೂರ್ಯ ನಗರ ಠಾಣೆ ಪೊಲೀಸರು, 7 ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ.