ಲಾರಿ, ಬೈಕ್ ನಡುವೆ ಡಿಕ್ಕಿ – ಯುವಕ ಸಾವು
ಭದ್ರಾವತಿ, ಏ. 12: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ, ಬೈಕ್ ಸವಾರ ಮೃತಪಟ್ಟ ಘಟನೆ ಹೊಳೆಹೊನ್ನೂರು ಸಮೀಪದ ಭದ್ರಾವತಿ ರಸ್ತೆಯ ಸಂತೋಷ್ ರೈಸ್ ಮಿಲ್ ಸಮೀಪ ರಾತ್ರಿ ನಡೆದಿದೆ.
ಮಾರಶೆಟ್ಟಿಹಳ್ಳಿ ಗ್ರಾಮದ ನಿವಾಸಿ ವಿನುತ್ ಘೋರ್ಪಡೆ (23) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಮೃತ ಯುವಕ ಭದ್ರಾವತಿ ತಾಲೂಕಿನ ಹಿರಿಯ ರೈತ ಮುಖಂಡ ಯಶವಂತರಾವ್ ಘೋರ್ಪಡೆ ಅವರ ಮೊಮ್ಮಗನಾಗಿದ್ದಾನೆ.
ಭದ್ರಾವತಿಯ ಖಾಸಗಿ ನರ್ಸಿಂಗ್ ಆಸ್ಪತ್ರೆಯಲ್ಲಿ ಯುವಕ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿಕೊಂಡು ಬೈಕ್ ನಲ್ಲಿ ಮಾರಶೆಟ್ಟಿಹಳ್ಳಿಗೆ ಹಿಂದಿರುಗುವಾಗ ಅವಘಡ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.