Headlines

ಹೊಸನಗರ ತಾಲೂಕಿನ ವಿವಿಧೆಡೆ ಭಾರಿ ಗಾಳಿ ಮಳೆಗೆ ನೆಲಕ್ಕುರುಳಿದ ಮರಗಳು – ಎಲ್ಲೆಲ್ಲಿ ಏನೇನಾಗಿದೆ..!?

ಹೊಸನಗರ ತಾಲೂಕಿನ ವಿವಿಧೆಡೆ ಭಾರಿ ಗಾಳಿ ಮಳೆಗೆ ನೆಲಕ್ಕುರುಳಿದ ಮರಗಳು – ಎಲ್ಲೆಲ್ಲಿ ಏನೇನಾಗಿದೆ..!?

ಹೊಸನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ 3;30 ರಿಂದ ವರ್ಷದ ಮೊದಲ ಮಳೆ ಸತತ ಒಂದೂವರೆ ಗಂಟೆಗಳ ಕಾಲ ಬಿರುಗಾಳಿ ಸಹಿತ ಸುರಿದಿದ್ದು ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ.

ಕೊಪ್ಪರಗುಂಡಿ ಸೇತುವೆ ಬಳಿಯಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದ್ದು , ಎಂ ಗುಡ್ಡೆಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ , ಕೋಡುರು ಸಮೀಪದಲ್ಲಿ ಮುಖ್ಯ ರಸ್ತೆಯಲ್ಲಿ ಲೈನ್‌ಮೇಲೆ ಮರ ಬಿದ್ದು ಸಂಚಾರಕ್ಕೆ ಅಸ್ತವ್ಯಸ್ತವಾಗಿದೆ , ಹೊಸನಗರ ಬಿ ಎಸ್ ಎನ್ ಎಲ್ ಕಛೇರಿ ಸಮೀಪದಲ್ಲಿ ಮರ ಬಿದ್ದು ಇಂಟರ್ ನೆಟ್ ಸೇವೆ ಹಾಗೂ ವಿದ್ಯುತ್ ವ್ಯತ್ಯಯವಾಗಿದೆ.

ಕೋಡೂರು ಗ್ರಾಪಂ ವ್ಯಾಪ್ತಿಯ ಹುಂಚ ಹೋಬಳಿ ಕರಿಗೆರಸು ಗ್ರಾಮದ ಹಿಂಡ್ಲೆಮನೆ ನಿವಾಸಿ ರೈತ ಶ್ರೀನಿವಾಸ ಹೆಚ್.ಕೆ ಬಿನ್ ಕೃಷ್ಣಪ್ಪ ಎಂಬುವರಿಗೆ ಸೇರಿದ ಸ.ನಂ.26/1 ಮತ್ತು 24 ರ ಜಮೀನಿನಲ್ಲಿನ ನೂರಾರು ಅಡಿಕೆ ಮರಗಳು ಮತ್ತು ತೆಂಗಿನಮರ ಧರೆಗುರುಳಿದ್ದು ಕಾಳುಮೆಣಸು ಸೇರಿದಂತೆ ಇನ್ನಿತರ ಬೆಳೆ ಹಾನಿಯಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಬಿರುಗಾಳಿ ಹೊಡೆತಕ್ಕೆ ನೂರಾರು ಅಡಿಕೆ ಗಿಡಗಳು ನೆಲಕ್ಕೆ ಬಿದ್ದಿವೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲಕ್ಷಾಂತರ ರೂ. ಸಾಲ ಮಾಡಿ ಬೆಳೆದ ಬೆಳೆ ಬಿರುಗಾಳಿಗೆ ಸಿಲುಕಿದ್ದು ಸಂಪೂರ್ಣ ತೋಟವೇ ನಾಶವಾಗಿದೆ ಎಂದು ರೈತ ಶ್ರೀನಿವಾಸ ಅಳಲನ್ನು ತೋಡಿಕೊಂಡಿದ್ದಾರೆ.

ಪರಿಹಾರಕ್ಕೆ ಒತ್ತಾಯ :

ಈ ಭಾಗದಲ್ಲಿ ಬೀಸಿದ ಬಿರುಗಾಳಿಗೆ ಅಡಿಕೆ, ತೆಂಗು ಬೆಳೆ ಹಾಳಾಗಿದ್ದು, ಸಂಬಂಧಿಸಿದ ಇಲಾಖೆ ಬೆಳೆ ನಷ್ಟವಾಗಿರುವ ರೈತರಿಗೆ ಹೆಚ್ಚಿನ ಪರಿಹಾರ ಧನ ವಿತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇನ್ನೂ ಈ ಭಾಗದಲ್ಲಿ ಏಕಾಏಕಿ ಬಂದ ಭಾರಿ ಗಾಳಿ, ಮಳೆಗೆ ನೂರಾರು ಕಾಡು ಜಾತಿಯ ಮರಗಳು ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಹಲವೆಡೆ ಮನೆಗಳ ಮೇಲ್ಛಾವಣಿ ಹಾರಿಹೋದ ಬಗ್ಗೆ ವರದಿಯಾಗಿದೆ.

Leave a Reply

Your email address will not be published. Required fields are marked *