ರಿಪ್ಪನ್‌ಪೇಟೆ , ಆನಂದಪುರ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡುತಿದ್ದ ಮನೆಗಳ್ಳ ಅರೆಸ್ಟ್ – 32 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ವಶಕ್ಕೆ
ರಿಪ್ಪನ್‌ಪೇಟೆ ಹಾಗೂ ಆನಂದಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತರಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ರಿಪ್ಪನ್‌ಪೇಟೆ ಠಾಣೆ ವ್ಯಾಪ್ತಿಯ ಕೋಡೂರು , ದೂನ , ನೆವಟೂರು ಸೇರಿದಂತೆ ಐದು ಮನೆ ಕಳ್ಳತನ ಹಾಗೂ ಆನಂದಪುರ ಠಾಣೆ ವ್ಯಾಪ್ತಿಯ ನಾಲ್ಕು ಪ್ರಕರಣದ ಹಾಗೂ ವಿವಿಧ ಠಾಣೆಗಳಲ್ಲಿ ಒಟ್ಟು 12 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಬಸವಾಪುರ ಗ್ರಾಮದ ಅಶೋಕ್ ಕೆ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಈ ಮನೆಗಳ್ಳನಿಂದ ಚಿನ್ನಾಭರಣ ಖರೀದಿಸಿದ ಕಾರಣಕ್ಕಾಗಿ ಶಿವಮೊಗ್ಗ ತಾಲ್ಲೂಕಿ ಹಾರನಳ್ಳಿ ಗ್ರಾಮದ ಚಿನ್ನಬೆಳ್ಳಿ ತಯಾರಿಕೆ ಕೆಲಸ ಮಾಡುತ್ತಿದ್ದಂತ ಚಂದ್ರಹಾಸ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಬಂಧಿತ ಆರೋಪಿಗಳಿಂದ 387 ಗ್ರಾಂ ಚಿನ್ನ, 384 ಗ್ರಾಂ ಬೆಳ್ಳಿ ಹಾಗೂ ಕೃತ್ಯಕ್ಕೆ ಉಪಯೋಗಿಸಿದಂತ 2 ಬೈಕ್ ಸಹಿತ ಸುಮಾರು 32,23,688 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದಂತ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಅವರು, ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದವು.
ಈ ಕೇಸ್ ಗಳನ್ನು ಬೇಧಿಸಿ ಆರೋಪಿ ಪತ್ತೆಗಾಗಿ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಅವರು ಸೂಚಿಸಿದ್ದರು ಎಂದರು.
ಎಸ್ಪಿ ಸೂಚನೆಯಂತೆ ಸಾಗರ ಗ್ರಾಮಾಂತರ ವೃತ್ತ ನಿರೀಕ್ಷಕ ಸಂತೋಷ್ ಶೆಟ್ಟಿ ಅವರ ನೇತೃತ್ವದಲ್ಲಿ, ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಯುವರಾಜ್.ಕೆ, ಸಿಬ್ಬಂದಿಗಳಾದಂತ ಅಶೋಕ್, ಪರಶುರಾಮ, ಉಮೇಶ್ ಲಮಾಣಿ, ಸಂತೋಷ್ ಕುಮಾರ್, ನೂತನ್, ನಿರಂತನ್, ಸುಬ್ರಹ್ಮಣ್ಯ ಎಸ್, ಭರತ್ ಕುಮಾರ್, ಚಾಲಕ ನರಸಿಂಹಸ್ವಾಮಿ, ಸತೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು ಎಂದು ಹೇಳಿದರು.
ಇಬ್ಬರು ಆರೋಪಿಗಳ ಬಂಧನದಿಂದಾಗಿ ಆನಂದಪುರ ಠಾಣೆಯಲ್ಲಿ ದಾಖಲಾಗಿದ್ದಂತ ನಾಲ್ಕು ಅಪರಾಧ ಪ್ರಕರಣ, ರಿಪ್ಪನ್ ಪೇಟೆ ಠಾಣೆಯಲ್ಲಿ ದಾಖಲಾಗಿದ್ದಂತ 5, ಹೊಸನಗರ ಪೊಲೀಸ್ ಠಾಣೆಯ ಒಂದು ಕೇಸ್, ಮಾಳೂರು ಪೊಲೀಸ್ ಠಾಣೆಯ 1 ಕೇಸ್ ಹಾಗೂ ಸಾಗರ ಪೇಟೆ ಠಾಣೆಯ 1 ಕೇಸ್ ಸೇರಿದಂತೆ ಒಟ್ಟು 12 ಕೇಸ್ ಬೇಧಿಸಿದಂತೆ ಆಗಿದೆ ಎಂದರು.