ಹಾಡಹಗಲೇ ಮನೆ ಕಳವು ಮಾಡಿದ್ದ ಆರೋಪಿಯ ಬಂಧನ – ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ವಶಕ್ಕೆ.!
ಹೊಸನಗರ : ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯ ಪಿಎಸೈ ಶಿವಾನಂದ್ ಕೆ ನೇತ್ರತ್ವದ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಘಟನೆ ನಡೆದಿದೆ.
ಹೊಸನಗರ ತಾಲೂಕಿನ ನಗರ ಹೋಬಳಿಯ ಕಟ್ಟಿನಹೊಳೆ ನಿವಾಸಿ ಶರತ್ ಎಂಬಾತನನ್ನು ಬಂಧಿಸಿ ಚಿನ್ನಾಭರಣ ಹಾಗೂ ಕಳ್ಳತನಕ್ಕೆ ಬಳಸಿದ್ದ ಬೈಕ್ ನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಿಂದ ಹಾಲಿ ಮಾರುಕಟ್ಟೆ ಮೌಲ್ಯದ ಅಂದಾಜು 100000 ರೂ. ಮೌಲ್ಯದ 12 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 65 ಸಾವಿರ ರೂ ಮೌಲ್ಯದ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಕಳವು ಪ್ರಕರಣ :
03-03-2025 ರ ಮಧ್ಯಾಹ್ನ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮತ್ತಿಕೈ ಗ್ರಾಮದ ಪರಶುರಾಮ ಎಂಬುವವರು ಸಂಬಂಧಿಕರ ಮನೆಯ ಉಪನಯನ ಕಾರ್ಯಕ್ರಮಕ್ಕೆ ತೆರಳಿ ಹಿಂದಿರುಗಿದಾಗ ಮನೆಯಲ್ಲಿ ಕಳವು ಕೃತ್ಯ ನಡೆದಿತ್ತು.
ಕಾರ್ಯಕ್ರಮದಿಂದ ವಾಪಾಸ್ ಆಗಮಿಸಿದಾಗ, ಮನೆಯ ಮುಂಬಾಗಿಲು ಹೊಡೆದು ಮನೆಯ ರೂಮ್ ನ ಕಪಾಟಿನಲ್ಲಿದ್ದ 12 ಗ್ರಾಂ ಚಿನ್ನದ ಸರ ಹಾಗೂ 15 ಸಾವಿರ ರೂ ನಗದು ಕಳ್ಳತನವಾಗಿರುವ ಬಗ್ಗೆ ಬೆಳಕಿಗೆ ಬಂದಿತ್ತು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಶ್ಲಾಘಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣೆಯ ಎಎಸ್ ಐ ಗಳಾದ ಕುಮಾರ್ ಟಿ ಎಸ್ , ಶೇಖ್ ಅಮೀರ್ ಜಾನ್ ಸಿಬ್ಬಂದಿಗಳಾದಕಿರಣ್ ಕುಮಾರ್ , ವಿಶ್ವನಾಥ್ , ಪ್ರವೀಣ್ ಕುಮಾರ್ ,ಶಿವಕುಮಾರ್ ನಾಯ್ಕ್ ,ರವಿಚಂದ್ರನ್ ,ಸುಜಯ್ ಕುಮಾರ್ , ಪ್ರಜ್ವಲ್ ,ಸಚಿನ್ ಹಾಗೂ ಶಶಿಧರ್ ಇದ್ದರು.