ಅಪಘಾತ ತಡೆಗೆ ರಿಪ್ಪನ್‌ಪೇಟೆ ಪೊಲೀಸರಿಂದ ವಿಶೇಷ ಕಾರ್ಯಾಚರಣೆ
ರಿಪ್ಪನ್‌ಪೇಟೆ : ಅಪಘಾತಗಳ ನಿಯಂತ್ರಣಕ್ಕಾಗಿ, ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸುವ ವಿಶೇಷ ಕಾರ್ಯಾಚರಣೆಯನ್ನು ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳು ನಡೆಸಿದ್ದಾರೆ.
ಅಪಘಾತಗಳ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ, ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸುವ ಕಾರ್ಯಾಚರಣೆಯನ್ನು ಜಿಲ್ಲೆಯಾದ್ಯಂತ ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ರಾತ್ರಿ ವೇಳೆ ಸರಕು ಸಾಗಾಣೆ ವಾಹನಗಳು, ಲಾರಿ, ಟ್ರ್ಯಾಕ್ಟರ್ ಸೇರಿದಂತೆ ಭಾರೀ ವಾಹನಗಳ ಗೋಚರತೆ ಹೆಚ್ಚಿಸಲು ಸದರಿ ವಿಶೇಷ ಕಾರ್ಯಾಚರಣೆಯನ್ನು ಜಿಲ್ಲೆಯಾದ್ಯಂತ ನಡೆಸಲಾಗುತ್ತಿದೆ. ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸುವುದರಿಂದ, ಚಾಲಕರಿಗೆ ಮುಂದೆ ಹೋಗುತ್ತಿರುವ ಹಾಗೂ ಮುಂಭಾಗದಿಂದ ಆಗಮಿಸುವ ವಾಹನಗಳ ಗೋಚರತೆ ಹೆಚ್ಚಾಗುತ್ತದೆ.ಇದರಿಂದ ವಾಹನಗಳ ಅಸ್ಪಷ್ಟ ಗೋಚರತೆಯಿಂದ ಉಂಟಾಗಬಹುದಾದ ಅಪಘಾತಗಳ ನಿಯಂತ್ರಣ ಸಾಧ್ಯವಾಗುತ್ತದೆ. ಈ ಕಾರಣದಿಂದ ಪ್ರತಿಯೊಂದು ವಾಹನಗಳ ಚಾಲಕರು, ತಮ್ಮ ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸಬೇಕು. ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ಈ ಸಂಧರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ್ , ರಾಮಚಂದ್ರ , ಸಂತೋಷ್ ಕೊರವರ ,ಸುರೇಶ್ , ಪ್ರವೀಣ್ ಪಿ ಹಾಗೂ ಮಧುಸೂಧನ್ ಇದ್ದರು.