
ಶಿವಮೊಗ್ಗದ ಪಬ್ಲಿಕ್ ಟಿವಿಯ ಹಿರಿಯ ವರದಿಗಾರ ಶಶಿಧರ್ ಕೆ.ವಿ ಇನ್ನಿಲ್ಲ – ಕಂಬನಿ ಮಿಡಿದ ಅಪಾರ ಪತ್ರಿಕಾ ಬಳಗ
ಶಿವಮೊಗ್ಗದ ಆಕ್ಟಿವ್ ಜರ್ನಲಿಸ್ಟ್ ಎಂದೇ ಬಿಂಬಿತವಾಗಿದ್ದ, ಪಬ್ಲಿಕ್ ಟಿವಿಯ ಹಿರಿಯ ವರದಿಗಾರ ಶಶಿಧರ್ ಕೆ.ವಿ ಆಕಸ್ಮಿಕವಾಗಿ ಸಾವು ಕಂಡಿದ್ದಾರೆ. ಇಂದು ಬೆಳಿಗ್ಗೆ ತಮ್ಮ ಶಿವಮೊಗ್ಗದ ನಿವಾಸದಲ್ಲಿ ಬಾತ್ ರೂಂ ಗೆ ಹೋದ ಶಶಿಧರ್ ಆಕಸ್ಮಿಕವಾಗಿ ಹಿಮ್ಮುಖವಾಗಿ ಕುಸಿದು ಬಿದ್ದ ಪರಿಣಾಮ ತಲೆಗೆ ತೀವೃ ಪೆಟ್ಟು ಬಿದ್ದಿತ್ತು. ಮನೆಯಲ್ಲಿ ಯಾರು ಇಲ್ಲದ ಹೊತ್ತಿನಲ್ಲಿಯೇ ಈ ಘಟನೆ ನಡೆದಿದ್ದರಿಂದ ತಲೆಯಲ್ಲಿ ರಕ್ತ ಹೆಪ್ಪು ಗಟ್ಟಿತ್ತು. ತದನಂತರ ವಿಷಯ ಗೊತ್ತಾಗಿ ಶಶಿಧರ್ ರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಕಾಲ ಮಿಂಚಿಹೋಗಿತ್ತು.
ವೈದ್ಯರು ಚಿಕಿತ್ಸೆ ಕೊಡಲು ಅಣಿಯಾಗಲು ಶಶಿಧರ್ ರ ಅನಾರೋಗ್ಯದ ಸಮಸ್ಯೆ ಎದುರಾಗಿತ್ತು. ಕುಟುಂಬಸ್ಥರ ಸಹಿ ಪಡೆದು ಚಿಕಿತ್ಸೆ ಮುಂದುವರೆಸಲು ಅಣಿಯಾಗುವ ಹೊತ್ತಿಗೆ ಎಮೆರ್ಜೆನ್ಸಿಯಲ್ಲಿ ದಾಖಲಾಗಿದ್ದ ಶಶಿಧರ್ ರವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಶಿವಮೊಗ್ಗದ ಪತ್ರಕರ್ತರು ಶಶಿಯವರನ್ನು ಮಾತನಾಡಿಸಿ ಧೈರ್ಯ ತುಂಬಿದ್ದರು. ಈ ಸಂದರ್ಭದಲ್ಲಿ ಅವರ ಕಣ್ಣಾಲೆಗಳು ಒದ್ದೆಯಾಗಿದ್ದವು. ಬದುಕುವ ಧೈರ್ಯವನ್ನು ಅವರು ಕಳೆದುಕೊಂಡಂತೆ ಭಾಸವಾದರು.
ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆ ತಾಲೂಕಿನ ಕಡೂರಿಗೆ ಸನಿಹವಿರುವ ಕಲ್ಲಳ್ಳಿ ಗ್ರಾಮದವರು. ತಂದೆ ಹೊಸಂತಪ್ಪ ಹಾಗು ತಾಯಿ ಸಾವಿತ್ರಮ್ಮನ ಹಿರಿಯ ಪುತ್ರನಾಗಿ ಜನಿಶಿದ ಶಶಿ ಸ್ವಗ್ರಾಮದಲ್ಲಿ ನಂತರ ಅರಸೀಕೆರೆಯಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದರು. ಪತ್ರಿಕೋಧ್ಯಮಕ್ಕೆ ಬರುವ ಆಶಯದೊಂದಿಗೆ ಮೈಸೂರಿನಲ್ಲಿ 2006 ರಲ್ಲಿ ಎಂಎ ಜರ್ನಲಿಸಂ ಸೇರ್ಪಡೆಗೊಂಡರು. ಸ್ನಾತಕೊತ್ತರ ಪದವಿಯ ನಂತರ ಈಟಿವಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದರು.
ನಂತರ ಚಾಮರಾಜ ನಗರದಲ್ಲಿ ಸುವರ್ಣ ಟಿವಿಯ ವರದಿಗಾರರಾಗಿ ಸೇವೆ ಸಲ್ಲಿಸದರು. ಇದಾದ ಬಳಿಕ ಶಿವಮೊಗ್ಗದಲ್ಲಿ ಕಳೆದ ಆರು ವರ್ಷಗಳಿಂದ ಪಬ್ಲಿಕ್ ಟಿವಿಯಲ್ಲಿ ವರದಿಗಾರಗಾಗಿ ಸೇವೆ ಸಲ್ಲಿಸುತ್ತಾ ಬಂದರು. ಈ ಸಂದರ್ಭದಲ್ಲಿ ಕಿಡ್ನಿ ಸಮಸ್ಯೆ ಎದುರಾಗಿ, ಡಯಾಲೀಸ್ ಚಿಕಿತ್ಸೆಗೆ ಒಳಗಾಗಿದ್ದರೂ, ಶಶಿಧರ್, ಫೀಲ್ಡ್ ನಲ್ಲಿ ಆಕ್ಟಿವ್ ಆಗಿಯೇ ಕರ್ತವ್ಯ ನಿರ್ವಹಿಸಿ, ಎಲ್ಲದರನ್ನು ಬೆರಗಾಗುವಂತೆ ಮಾಡಿದ್ದರು.
ಆದರೆ ಶಶಿಧರ್ ಅವರ ಅಕಾಲಿಕ ಮರಣ ಶಿವಮೊಗ್ಗ ಮಾತ್ರವಲ್ಲ ರಾಜ್ಯದ ಪತ್ರಕರ್ತರ ಪಾಲಿಗೆ ನುಂಗಲಾರದ ತುತ್ತಾಗಿದೆ. ನಾಳೆ ಹುಟ್ಟೂರಿನಲ್ಲಿ ಶಶಿಯವರ ಪಾರ್ಥಿವ ಶರೀರದ ಅಂತ್ಯಕ್ರೀಯೆ ನಡೆಯಲಿದೆ.
ಶಶಿ ಸಾವಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗು ಕರ್ನಾಟಕ ಕಾರ್ಯ. ನಿರತ ಪತ್ರಕರ್ತರ ಸಂಘ ಶಿವಮೊಗ್ಗ ಶಾಖೆ ಕಂಬನಿ ಮಿಡಿದಿದೆ.
