RIPPONPETE | ಬೆಳ್ಳೂರಿನಲ್ಲಿ ಮನೆ ಬಾಗಿಲಲ್ಲಿ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ | ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ಮನೆ ಬಾಗಿಲಲ್ಲಿ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ಗುಬ್ಬಿಗಾ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಗುಬ್ಬಿಗಾ ಗ್ರಾಮದ ಮಂಜಪ್ಪಗೌಡ ಎಂಬುವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದ್ದು, ಮನೆ ಬಾಗಿಲು ಸಮೀಪವೇ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ.
ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ನಾಯಿಗಳು ಬೊಗಳಿದಾಗ ಮನೆಯವರು ಅಷ್ಟಾಗಿ ಪರೀಕ್ಷಿಸಿರಲಿಲ್ಲ. ಇಂದು ಬೆಳಿಗ್ಗೆ ಮನೆ ನಾಯಿ ಕಾಣಿಸದಿರುವಾಗ ಸಿಸಿ ಕ್ಯಾಮರವನ್ನು ಪರಿಶೀಲಿಸಿದ್ದು, ಚಿರತೆ ಬಂದು ನಾಯಿ ಹೊತ್ತೊಯ್ದಿರುವುದು ಗಮನಕ್ಕೆ ಬಂದಿದೆ.
ಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಾಗಲೇ ಆನೆಗಳ ಹಾವಳಿಯಿಂದ ಸ್ಥಳೀಯರು ಕಂಗೆಟ್ಟಿದ್ದು, ಇದೀಗ ಚಿರತೆ ಕಾಣಿಸಿಕೊಂಡಿದ್ದರಿಂದ ಆತಂಕಕ್ಕೊಳಗಾಗಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.