
ಮೃತ ತಂದೆ ಮಾಡಿದ್ದ ಸಾಲಕ್ಕೆ ಮಗನ ಅಪಹರಣ – ದೂರು ದಾಖಲು
ಶಿವಮೊಗ್ಗ: ತಂದೆ ಮಾಡಿದ್ದ ಸಾಲಕ್ಕೆ ಮಗನನ್ನು ಅಪಹರಣ ಮಾಡಿ, ಆತನಿಗೆ ಹಲ್ಲೆ ನಡೆಸಿದ್ದಲ್ಲದೆ ಆತನ ಕಾರು ಮಾರಾಟಕ್ಕೆ ದಾಖಲೆಪತ್ರಕ್ಕೆ ಸಹಿ ಹಾಕಿಸಿಕೊಂಡ ಘಟನೆ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯ ವಿವರ:
ಚಿಕ್ಕಲ್ ನಿವಾಸಿ ನಾಗೇಶ್ ಅಪರಹಣಕ್ಕೊಳಗಾಗಿ ದೂರು ನೀಡಿದವರು. ಅವರ ತಂದೆ ಸಿದ್ದೇಗೌಡ ಅಡಿಕೆ ವ್ಯಾಪಾರ ಮಾಡುತ್ತಿದ್ದು, ಕೊರೊನ ಹಿನ್ನೆಲೆಯಲ್ಲಿ ಮೃತಪಟ್ಟಿದ್ದರು. ಈ ಮಧ್ಯೆ ತಂದೆಯಿಂದ ಅಡಿಕೆ ಖರೀದಿ ಮಾಡಿದವರು ಸರಿಯಾಗಿ ಹಣವನ್ನು ವಾಪಾಸ್ ನೀಡಿರಲಿಲ್ಲ. ಇದರಿಂದ ಹಣದ ಅಡಚಣೆ ಆಗಿತ್ತು. ಸಿದ್ದೇಗೌಡರಿಗೆ ಅಡಿಕೆ ಕೊಟ್ಟವರಿಗೂ ಹಣ ಕೊಡುವುದು ಬಾಕಿ ಇತ್ತು, ಇವರಿಗೆ ಮಗ ನಾಗೇಶ್ ಹಣವನ್ನು ಕೊಡಬೇಕಾಗಿತ್ತು. ಹಿರಿಯ ಸಮ್ಮುಖದಲ್ಲಿ ಈ ಬಗ್ಗೆ ಮಾತುಕತೆ ಮಾಡಿ ಗ್ರಾಹಕರಿಗೆ ಸ್ವಲ್ಪ ಸ್ವಲ್ಪ ಹಣವನ್ನು ಕೊಟ್ಟು ತೀರಿಸಲಾಗಿತ್ತು,ಈ ಪೈಕಿ , ಖಾಸೀಫ್ ಎನ್ನುವವರು ನಾಗೇಶ್‌ಗೆ ನಿಮ್ಮ ತಂದೆ ೧೭ ಲಕ್ಷ ಹಣ ಕೊಡಬೇಕೆಂದು ಹೇಳಿದ್ದನು. ಅಷ್ಟೊಂದು ಹಣ ಕೊಡಲು ಆಗುವುದಿಲ್ಲ. ಎಂದು ನಾಗೇಶ್ ಹೇಳಿ ೧೧ ಲಕ್ಷ ಹಣವನ್ನು ಕೊಟ್ಟು ಇಷ್ಟೇ ಹಣ ಸಾಧ್ಯ ಎಂದಿದ್ದರು. ನಂತರದ ದಿನಗಳಲ್ಲಿ ಖಾಸೀಫ್ ಉಳಿದ ಹಣ ಕೊಡು ಎಂದು ಬೆನ್ನುಬಿದ್ದಿದ್ದರು.
ಜನವರಿ ೧೪ ರಂದು ನಾಗೇಶ್ ನೆಹರು ಸ್ಟೇಡಿಯಂ ಪಕ್ಕದ ಪೆಟ್ ಪ್ಲಾನೆಟ್ ಆಸ್ಪತ್ರೆಯಲ್ಲಿ ನಾಯಿಮರಿಗೆ ಚಿಕಿತ್ಸೆ ಕೊಡಿಸಲು ಬಂದಿದ್ದರು. ಆಸ್ಪತ್ರೆಯ ಹೊರಗಡೆ ಮೊಬೈಲ್‌ನಲ್ಲಿ ಮಾತನಾಡುತಿದ್ದಾಗ ಖಾಸೀಫ್ ಇಬ್ಬರ ಜೊತೆ ಕಾರಿನಲ್ಲಿ ಆತನನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಹಾಯ್‌ಹೊಳೆ ಹತ್ತಿರದ ಒಂದು ತೋಟದ ಬಳಿ ಶೆಡ್‌ಗೆ ಕರೆದುಕೊಂಡು ಹೋಗಿ ಹಣ ಕೊಡು ಅಂದರೆ ಕೊಡುತ್ತಿಲ್ಲ. ಈ ದಿನ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಕೈಗಳಿಂದ ಹೊಡೆದು ಅವಾಚ್ಯವಾಗಿ ಬೈದು ಬಲವಂತವಾಗಿ ನಾಗೇಶ್ ಬಳಿಯಿದ್ದ ಕಾರಿನ ಕೀ ಯನ್ನು ಕಿತ್ತುಕೊಂಡು ಕಾರನ್ನು ತನ್ನ ಹೆಸರಿಗೆ ಮಾರಾಟ ಮಾಡಿದಂತೆ ಫಾರಂಗಳಿಗೆ ಸಹಿ ಹಾಕಿಸಿಕೊಂಡು ಆತನ್ನು ಬಿಟ್ಟಿದ್ದರು.
ಈ ಘಟನೆ ನಂತರ ಮನೆಗೆ ಬಂದ ನಾಗೇಶ್ ಇವರ ವಿರುದ್ಧ ಕಠಿಣ ಕ್ರಮಜರುಗಿಸುವಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

