ಕಾಡಾನೆಗಳ ಸ್ಥಳಾಂತರ | ರಿಪ್ಪನ್‌ಪೇಟೆ – ಆಯನೂರು ಮಾರ್ಗ ಸಂಚಾರಕ್ಕೆ ಕೆಲಕಾಲ ಅಡಚಣೆ
ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಪಂ ವ್ಯಾಪ್ತಿಯ ಹಲವಾರು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದ್ದ ಆನೆಗಳ ಹಿಂಡನ್ನು ಅರಣ್ಯ ಇಲಾಖೆಯ ಕಾರ್ಯಾಚರಣೆ ನಡೆಸಿ ಓಡಿಸುವ ಸಂಧರ್ಭದಲ್ಲಿ ಸೂಡೂರಿನಲ್ಲಿ ರಸ್ತೆ ಮಧ್ಯೆ ಆನೆಗಳು ಪುಂಡಾಟ ನಡೆಸಿದ ಹಿನ್ನೆಲೆಯಲ್ಲಿ ಕೆಲ ಕಾಲ ಶಿವಮೊಗ್ಗ-ರಿಪ್ಪನ್ ಪೇಟೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದ ಘಟನೆ ನಡೆದಿದೆ.
ಮಲೆನಾಡಿನ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡಿನ ಉಪಟಳದಿಂದಾಗಿ ರೈತಾಪಿ ವರ್ಗ ಮತ್ತು ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಜೀವ ಭಯದಲ್ಲಿ ಓಡಾಡುವಂತಾಗಿದ್ದು ಇತ್ತೀಚೆಗೆ ಓರ್ವನ ಬಲಿ ಸಹ ಪಡೆದ ಹಿನ್ನೆಲೆಯಿಂದಾಗಿ ಅರಣ್ಯ ಇಲಾಖೆಯವರು ಕಾಡಾನೆಗಳ ಹಿಂಡನ್ನು ಸ್ಥಳಾಂತರಿಸಲು ಶತಾಯಗತಾಯ ಪ್ರಯತ್ನದೊಂದಿಗೆ ಪಣತೊಟ್ಟು ಕಾಡಾನೆಗಳ ಹಿಂಡಿಗೆ ಭಯ ಹುಟ್ಟಿಸುತ್ತಾ ಓಡಿಸಿಕೊಂಡು ದಾಟಿಸುವ ಪ್ರಯತ್ನದಿಂದಾಗಿ ಇಂದು ಶಿವಮೊಗ್ಗ-ರಿಪ್ಪನ್‌ಪೇಟೆ ಮಾರ್ಗದ ಸೂಡೂರು ಬಳಿ ಕೆಲಕಾಲ ವಾಹನ ಸಂಚಾರ ನಿಷೇಧಿಸಿದ್ದು ಕೆಲ ಸಮಯ ಸಂಚಾರ ಅಸ್ತವ್ಯಸ್ತವಾಗಿತ್ತು.
ಕಳೆದೊಂದು ವಾರದ ಹಿಂದೆ ಆಲವಳ್ಳಿ ಗ್ರಾಮದ ಮಜರೆ ಕಮದೂರು ಬಳಿ ಅಡಿಕೆ, ಬಾಳೆ ತೋಟಕ್ಕೆ ನುಗ್ಗಿ ಬೆಳೆ ನಾಶಗೊಳಿಸಿರುವುದು ಹಾಗೂ ಹಾರೋಹಿತ್ತಲು, ಬಸವಾಪುರ, ಬಟಾಣಿಜಡ್ಡು, ತುಪ್ಪೂರು, ಸೂಡೂರು, ಗಿಳಾಲಗುಂಡಿ, ಕೋಣೆಹೊಸೂರು, ತಂಗಳವಾಡಿ ಸೇರಿದಂತೆ ಹೀಗೆ ಹಲವು ಕಡೆಯಲ್ಲಿ ಕಾಡಾನೆಗಳ ಗುಂಪು ಕಾಣಿಸಿಕೊಂಡು ರೈತರ ಭತ್ತ, ಅಡಿಕೆ, ಬಾಳೆ ಬೆಳೆ ಧ್ವಂಸಗೊಳಿಸಿತ್ತು .
ಈ ಹಿನ್ನೆಲೆಯಲ್ಲಿ ದಾಳಿಗೊಳಗಾದ ತೋಟಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿ ರೈತರಿಗೆ ಸಾಂತ್ವಾನ ಹೇಳಿ ವೈಯುಕ್ತಿಕ ಧನ ಸಹಾಯ ಮಾಡುವ ಮೂಲಕ ಕೂಡಲೇ ಆನೆಗಳನ್ನು ಓಡಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಶುಕ್ರವಾರ ಮಾಜಿ ಸಚಿವ ಹರತಾಳು ಹಾಲಪ್ಪ ನೇತೃತ್ವದಲ್ಲಿ ಶಿವಮೊಗ್ಗದ ಸಿಸಿಎಫ್ ಕಛೇರಿ ಎದುರು ನೂರಾರು ರೈತ ಮುಖಂಡರೊಂದಿಗೆ ಪ್ರತಿಭಟನೆ ಸಹ ನಡೆಸುವ ಮೂಲಕ ಆನೆಗಳನ್ನು ಕೂಡಲೇ ಸ್ಥಳಾಂತರ ಮಾಡುವಂತೆ ಆಗ್ರಹಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅರಸಾಳು ವಲಯ ಅರಣ್ಯಾಧಿಕಾರಿ ಶರಣಪ್ಪ ಮತ್ತು ಚೋರಡಿ ಆಯನೂರು, ಸಿರಿಗೆರೆ ವಲಯ ವ್ಯಾಪ್ತಿಯ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಆನೆಗಳ ಜಾಡು ಹಿಡಿದು ಪಟಾಕಿ ಶಬ್ದ ಮಾಡಿ ಓಡಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದು ಸೂಡೂರು ಅವಣಿಗೆ ಕ್ರಾಸ್ ಹತ್ತಿರ ಬರುತ್ತಿದ್ದಂತೆ ಪುನಃ ಕಾಡಿನೊಳಗೆ ಹಿಂತಿರುಗಿ ಓಡಿ ವಾಪಾಸ್ಸಾಗಿರುತ್ತವೆಂದು ಹೇಳಲಾಗಿದೆ.
ಒಟ್ಟಾರೆಯಾಗಿ ಮಲೆನಾಡಿನ ವ್ಯಾಪ್ತಿಯಲ್ಲಿ ರೈತಾಪಿ ವರ್ಗ ಕಾಡಾನೆಗಳ ಉಪಟಳಕ್ಕೆ ಹೈರಾಣಾಗಿದ್ದು ಇಲಾಖೆಯವರಿಗೆ ಹಿಡಿಶಾಪ ಹಾಕುತ್ತಾ ನಮಗೆ ಜೀವನ ನಡೆಸಲು ರಕ್ಷಣೆ ಮಾಡಿಕೊಡಿ ಎನ್ನುವ ಹಂತಕ್ಕೆ ತಲುಪಿದ್ದಾರೆ.