ಮಾಂಸದಂಗಡಿ ಲೈಸೆನ್ಸ್ ವಿತರಣೆಯಲ್ಲಿ ಗ್ರಾಮಾಡಳಿತದಿಂದ ತಾರತಮ್ಯ – ಗ್ರಾಪಂ ಸದಸ್ಯ ಸುಂದರೇಶ್ ಆರೋಪ
ರಿಪ್ಪನ್‌ಪೇಟೆ : ಮಾಂಸದ ಅಂಗಡಿಯ ಲೈಸೆನ್ಸ್ ವಿತರಣೆಯಲ್ಲಿ ಗ್ರಾಮಾಡಳಿತ ತಾರತಮ್ಯ ಎಸಗುವುದರೊಂದಿಗೆ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿದೆ ಎಂದು ಗ್ರಾಪಂ ಸದಸ್ಯ ಸುಂದರೇಶ್ ಆರೋಪಿಸಿದ್ದಾರೆ.
ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಂಗಣದಲ್ಲಿ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸರ್ಕಾರದ ನಿಯಮಾವಳಿಗಳ ಪ್ರಕಾರ ಯಾವುದೇ ಹರಾಜು ಪ್ರಕ್ರಿಯೆಯನ್ನು ನಡೆಸದೆ ಬೇಕಾಬಿಟ್ಟಿ ಮಾಂಸದ ಅಂಗಡಿಗಳ ಲೈಸೆನ್ಸ್ ಗಳನ್ನು ಕಾನೂನು ಬಾಹಿರವಾಗಿ ವಿತರಿಸುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದರು
ಇನ್ನು ಜನನಿಬಿಡ ಪ್ರದೇಶದಲ್ಲಿರುವ ಮಾಂಸದ ಅಂಗಡಿಗಳ ಸುತ್ತಮುತ್ತ ಯಾವುದೇ ಸ್ವಚ್ಛತೆ ಇಲ್ಲದೆ ಇರುವುದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮಾಂಸದ ಅಂಗಡಿಗಳನ್ನು ಜನನಿಬಿಡ ಇಲ್ಲದೇ ಇರುವ ಪ್ರದೇಶದಲ್ಲಿ ನಿರ್ಮಿಸುವಂತೆ ಈಗಾಗಲೇ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದು ಇದಕ್ಕೆ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲವೆಂದರು.
ನಾಲ್ಕು ವರ್ಷಗಳ ಅವಧಿಯಲ್ಲಿ ಮಾಂಸದಂಗಡಿಯ ಹರಾಜು ಪ್ರಕ್ರಿಯೆಯ ಬಗ್ಗೆ ಪ್ರಶ್ನಿಸದೇ ಈಗ ದಿಡೀರ್ ಯಾಕೆ ಪ್ರಶ್ನಿಸುತಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಸೆಪ್ಟೆಂಬರ್ ತಿಂಗಳಿನಲ್ಲಿ ಗವಟೂರು ಗ್ರಾಮದ ವ್ಯಕ್ತಿಯೊಬ್ಬರು ಮಾಂಸದಂಗಡಿ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿದಾಗ ಸಾಮಾನ್ಯ ಸಭೆಯಲ್ಲಿ ಅರ್ಜಿ ತಿರಸ್ಕರಿಸಲಾಗಿತ್ತು ಆದರೆ ಡಿಸೆಂಬರ್ ತಿಂಗಳಿನಲ್ಲಿ ಇನ್ನೊಬ್ಬರಿಗೆ ಲೈಸೆನ್ಸ್ ವಿತರಿಸಿದ್ದಾರೆ ಹಾಗಾಗಿ ಪ್ರಶ್ನಿಸುತಿದ್ದೇನೆ ಎಂದರು.
ಪ್ರಭಾವಿ ಮಾಂಸದಂಗಡಿಯ ಮಾಲೀಕನ ಪರ ಬ್ಯಾಟ್ ಬೀಸುವ ಉದ್ದೇಶದಿಂದ ಈಗ ವಿರೋಧಿಸುತಿದ್ದೀರಾ ಎಂಬ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು “ನಾನು ಯಾರ ಪರವೂ ಇಲ್ಲ ಯಾರ ವಿರುದ್ದವೂ ಇಲ್ಲ ” ಬೇಕಾದರೇ ಸಂತೆ ಮಾರ್ಕೆಟ್ ನಲ್ಲಿರುವ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಲಿ ಇಲ್ಲದಿದ್ದರೆ ಸೂಕ್ತ ಇಂಗು ಗುಂಡಿ ಹಾಗೂ ಚರಂಡಿ ವ್ಯವಸ್ಥೆ ನಿರ್ಮಿಸಲಿ ಎನ್ನುವುದು ನನ್ನ ಆಗ್ರಹವೆಂದರು.