Headlines

ಸೈಫ್ ಅಲಿಖಾನ್ ಮನೆಯಲ್ಲಿ ಕರ್ನಾಟಕದ ದಯಾನಾಯಕ್ – ಈ ಎನ್ ಕೌಂಟರ್ ಸ್ಪೆಷಲಿಸ್ಟ್ ಬಗ್ಗೆ ನಿಮಗೆ ಗೊತ್ತಾ..!!?

ಸೈಫ್ ಅಲಿಖಾನ್ ಮನೆಯಲ್ಲಿ ಕರ್ನಾಟಕದ ದಯಾನಾಯಕ್ – ಈ ಎನ್ ಕೌಂಟರ್ ಸ್ಪೆಷಲಿಸ್ಟ್ ಬಗ್ಗೆ ನಿಮಗೆ ಗೊತ್ತಾ..!!?

ಕಳ್ಳರು ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಚಾಕುವಿನಿಂದ ಇರಿದ ಘಟನೆ ಇಂದು (ಜನವರಿ 16) ಬೆಳಗ್ಗೆ 2.30 ರಿಂದ 3 ಗಂಟೆ ಸುಮಾರಿಗೆ ನಡೆದಿದೆ. ಮುಂಬೈನ ಬಾಂದ್ರಾದಲ್ಲಿರುವ ನಿವಾಸದಲ್ಲಿ ಬೆಳ್ಳಂ ಬೆಳಗ್ಗೆ ನಡೆದ ಈ ಘಟನೆ ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸಿದೆ. ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಸೋಶಿಯಲ್ ಮೀಡಿಯಾಗಳಲ್ಲಿ ಆತಂಕವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಸೈಫ್ ಅಲಿ ಖಾನ್ ಸದ್ಯ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಬಾಲಿವುಡ್ ನಟಿ ಸೈಫ್ ಅಲಿ ಖಾನ್‌ಗೆ ಆರು ಬಾರಿ ಚಾಕುವಿನಿಂದ ಇರಿಯಲಾಗಿದೆ. ಭುಜ, ಕುತ್ತಿಗೆ ಸೇರಿದಂತೆ ಬೆನ್ನುಹುರಿಯ ಸಮೀಪ ಒಮ್ಮೆ ತಿವಿಯಲಾಗಿದೆ ಎಂದು ವರದಿಯಾಗಿದೆ. ಸದ್ಯ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್ ಅಲಿ ಖಾನ್‌ಗೆ ವೈದ್ಯರು ಚಿಕಿತ್ಸೆಯನ್ನು ನೀಡುತ್ತಿದ್ದಾರೆ.

ಇನ್ನು ಈ ಘಟನೆ ಮುಂಬೈ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ. ಅಷ್ಟೊಂದು ಸೆಕ್ಯೂರಿಟಿ ಇರುವ ನಟನ ಮನೆಯೊಳಗೆ ನುಗ್ಗಿ ಹಲ್ಲೆ ಮಾಡಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಮುಂಬೈ ಪೊಲೀಸರು ಈಗ ತನಿಖೆಯನ್ನು ಆರಂಭಿಸಿದ್ದು, ಮೂವರನ್ನು ಬಂಧಿಸಿದ್ದಾರೆಂಬ ಮಾಹಿತಿ ಹೊರಬಿದ್ದಿದೆ. ಆದರೆ, ಇದೇ ವೇಳೆ ಸೈಫ್ ಅಲಿಖಾನ್ ಮನೆಯಲ್ಲಿ ಮುಂಬೈನ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಕಾಣಿಸಿಕೊಂಡಿದ್ದು, ಅಚ್ಚರಿ ಮೂಡಿಸಿದೆ.

ಮುಂಬೈ ಪೊಲೀಸರು, ಫಾರೆನ್ಸಿಕ್ ಡಿಪಾರ್ಟ್‌ಮೆಂಟ್, ಕ್ರೈಂ ಬ್ರ್ಯಾಂಚ್ ಸೈಫ್ ಮನೆಯಲ್ಲಿ ಬೀಡು ಬಿಟ್ಟಿದೆ. ಇದೇ ವೇಳೆ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಕೂಡ ಕಾಣಿಸಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ಮನೆಯ ರಾಬರಿ ಕೇಸ್‌ ಅನ್ನು ದಯಾ ನಾಯಕ್ ತನಿಖೆ ಮಾಡುತ್ತಿದ್ದಾರಾ? ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಆದರೆ, ಸೈಫ್ ಮನೆಯ ಮುಂದೆ ರಿಲ್ಯಾಕ್ಸ್ ಮೂಡ್‌ನಲ್ಲಿ ಇರುವ ದಯಾ ನಾಯಕ್ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.

ಯಾರಿದು ದಯಾ ನಾಯಕ್?

ಮುಂಬೈ ಪೊಲೀಸ್ ದಯಾ ನಾಯಕ್ ‘ಎನ್‌ಕೌಂಟರ್‌ ಸ್ಪೆಷಲಿಸ್ಟ್’ ಅಂತಲೇ ಜನಪ್ರಿಯ. ಕರ್ನಾಟಕ ಮೂಲದ ದಯಾ ನಾಯಕ್ ಮಹಾರಾಷ್ಟ್ರದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಇವರ ಎನ್‌ಕೌಂಟರ್‌ ಕಥೆಗಳು ಸಿನಿಮಾಗಳಾಗಿವೆ. ಹಿಂದಿಯ ಜನಪ್ರಿಯ ಶೋ ಸಿಐಡಿಯಲ್ಲೂ ಇನ್ಸ್‌ಪೆಕ್ಟರ್ ದಯಾ ಅನ್ನೋ ಹೆಸರಿನ ಪಾತ್ರವಿದೆ. ಮುಂಬೈನಲ್ಲಿ ದಯಾ ನಾಯಕ್ ಸಿಕ್ಕಾಪಟ್ಟೆ ಫೇಮಸ್. ಸೆಲೆಬ್ರಿಟಿಗಳ ಫೇವರಿಟ್ ಕೂಡ ಹೌದು.

ದಯಾ ನಾಯಕ್ ಬಾಲ್ಯದ ದಿನಗಳನ್ನು ಕಳೆದಿದ್ದು ಕರ್ನಾಟಕದಲ್ಲಿಯೇ. ಏಳನೇ ತರಗತಿ ವರೆಗೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ. ಕಡು ಬಡತನ ಕುಟುಂಬದಲ್ಲಿ ಜನಿಸಿದ ದಯಾ ನಾಯಕ್ 1979ರಲ್ಲಿ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಅಲ್ಲಿ ಆರಂಭದ ದಿನಗಳಲ್ಲಿ ಹೊಟೇಲ್‌ನಲ್ಲಿ ಟೇಬಲ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು.

87 ಎನ್‌ಕೌಂಟರ್

ಹೊಟೇಲ್ ಮಾಲೀಕರು ದಯಾ ನಾಯಕ್ ಪ್ರತಿಭೆಯನ್ನು ಗುರುತಿಸಿ ಶಿಕ್ಷಣವನ್ನು ಕೊಡಿಸಿದರು. ಅಲ್ಲಿಂದ ದಯಾ ನಾಯಕ್ ಬದುಕು ಬದಲಾಗುತ್ತಾ ಹೋಯ್ತು. ಪದವಿಯನ್ನು ಮುಗಿಸಿದ ಬಳಿಕ ದಯಾ ನಾಯಕ್ 1995ರಲ್ಲಿ ಮುಂಬೈನ ಜುಹು ಪೊಲೀಸ್ ಠಾಣೆಗೆ ಮೊದಲ ಪೋಸ್ಟಿಂಗ್ ಆಗಿತ್ತು. ತನ್ನ ಮೊದಲ ಎನ್‌ಕೌಂಟರ್‌ನಲ್ಲಿ ಭೂಗತಲೋಕದ ಇಬ್ಬರು ಗ್ಯಾಂಗ್‌ಸ್ಟರ್‌ಗಳನ್ನು ಎನ್‌ಕೌಂಟರ್ ಮಾಡಿದ್ದರು.

ಅಲ್ಲಿಂದ ಇಲ್ಲಿವರೆಗೂ ಸುಮಾರು 87 ಎನ್‌ಕೌಂಟರ್‌ಗಳನ್ನು ಮಾಡಿದ್ದಾರೆ ಎನ್ನಲಾಗಿದೆ. 1999 ರಿಂದ ಸುಮಾರು ನಾಲ್ಕು ವರ್ಷಗಳ ಕಾಲ ಛೋಟಾ ರಾಜನ್ ಗ್ಯಾಂಗ್ ಅನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ವೇಳೆ ಹಲವು ಎನ್‌ಕೌಂಟರ್‌ಗಳನ್ನು ಮಾಡಿದ್ದರು. ಇದರಿಂದ ಎಷ್ಟು ಜನಪ್ರಿಯತೆಯನ್ನು ಪಡೆದಿದ್ದರೋ ಅಷ್ಟೇ ವಿವಾದಕ್ಕೂ ಒಳಗಾಗಿದ್ದರು.

Leave a Reply

Your email address will not be published. Required fields are marked *