ಕಾರ್ ಮಕ್ಯಾನಿಕ್ ಜಿಕ್ರುಲ್ಲಾ ಕೊಲೆ ಪ್ರಕರಣ – ನಾಲ್ವರು ಯುವಕರಿಗೆ ಜೀವಾವಧಿ ಶಿಕ್ಷೆ ಪ್ರಕಟ
ಶಿವಮೊಗ್ಗ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹರಿತವಾದ ಆಯುಧದಿಂದ ಚುಚ್ಚಿ ಹೊಸಳ್ಳಿಯ ಕಾರ್ ಮೆಕ್ಯಾನಿಕ್‌ನನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಘೋಷಿಸಿದೆ.
ಜಿಕ್ರುಲ್ಲಾ (೨೮) ಎಂಬಾತನನ್ನು ಕೊಲೆಗೈದಿದ್ದ ಮಿಳಘಟ್ಟದ ಶಹಬಾಜ್ ಶರೀಫ್ (೨೦) ಟೆಂಪೋ ಸ್ಟ್ಯಾಂಡ್ ಬಳಿಯ ವಸೀಂ ಅಕ್ರಂ ಅಲಿಯಾಸ್ ಉಂಗ್ಲಿ (೨೦), ಬುದ್ಧನಗರದ ವಸೀಂ ಅಕ್ರಂ ಅಲಿಯಾಸ್ ಕಾಲಾ ವಸೀಂ (೨೦) ಮತ್ತು ಮುರಾದ್‌ನಗರದ ಫಯಾಜ್ ಉಲ್ಲಾ ರೆಹಮಾನ್ ಅಲಿಯಾಸ್ ರುಮಾನ್ (೨೩) ಶಿಕ್ಷೆ ವಿಧಿಸಿದೆ.
ಬುದ್ಧನಗರದಲ್ಲಿ ಕಾರ್ ಪಾರ್ಕಿಂಗ್ ಮಾಡುವ ವಿಚಾರವಾಗಿ ಗ್ಯಾಸ್ ಇಮ್ರಾನ್ ನೊಂದಿಗೆ ಜಗಳವಾಗಿತ್ತು ಹಾಗೂ ಈ ಹಿಂದೆ ಟ್ವಿಸ್ಟ್ ಇಮ್ರಾನ್‌ನೊಂದಿಗೂ ಗಲಾಟೆಯಾಗಿತ್ತು ಈ ದ್ವೇಷದ ಹಿನ್ನೆಲೆಯಲ್ಲಿ ೨೦೨೨ ರ ಮಾ. ೧೯ರಂದು ರಾತ್ರಿ ಎನ್ ಟಿ ರಸ್ತೆ ಫಲಕ್ ಶಾದಿ ಮಹಲ್ ಪಕ್ಕ ರಸ್ತೆಯಲ್ಲಿ ಜಿಕ್ರುಲ್ಲಾ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತ ನಿಂತಿದ್ದಾಗ ಈ ಮೇಲಿನ ಆರೋಪಿಗಳು ಹರಿತವಾದ ಆಯುಧದಿಂದ ಜಿಕ್ರುಲ್ಲಾ ನ ಮೈಕೈ ಗೆ ಚುಚ್ಚಿ, ತಲೆಗೆ ಹೊಡೆದು ತೀವ್ರ ಸ್ವರೂಪದ ಮಾರಣಾಂತಿಕ ಹಲ್ಲೆ ಮಾಡಿದ್ದರು.
ಜಿಕ್ರುಲ್ಲಾನನ್ನು ಕೂಡಲೇ ಚಿಕಿತ್ಸೆಗೆಂದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮಾರನೆಯ ದಿನು ಮೃತಪಟ್ಟಿದ್ದನು. ಮೃತನ ಸಹೋದರ ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಆಗಿನ ತನಿಖಾಧಿಕಾರಿ ಸಿಪಿಐ ಅಂಜನ್‌ಕುಮಾರ್ ತನಿಖೆ ಪೂರೈಸಿ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪುಷ್ಪಾ ಪ್ರಕರಣದ ವಾದ ಮಂಡಿಸಿದ್ದರು. ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ನ್ಯಾಯಾಧೀಶೆ ಬಿ.ಪಲ್ಲವಿ ಗುರುವಾರ ನಾಲ್ಕೂ ಜನ ಆರೋಪಿತರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ ೩೦,೦೦೦ ದಂಡ ವಿಧಿಸಿ ಆದೇಶಿಸಿದ್ದಾರೆ.

